'ನಮ್ಮ ಪಕ್ಷ ಒಂದು ಕುಟುಂಬ ಇದ್ದಂತೆ, ಕುಟುಂಬದ ಸಮಸ್ಯೆಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಹಾಗಾಗಿ ಈ ಬಗ್ಗೆ ರಾಜ್ಯದ ಜನರಲ್ಲಿ ಗೊಂದಲ ಬೇಡ. ಆಸೆ, ಅಪೇಕ್ಷೆಯನ್ನೇ ಭಿನ್ನಮತ ಎಂದು ಹೇಳಲು ಆಗಲ್ಲ. ಸರಕಾರ ಸುಭದ್ರವಾಗಿದೆ ಎಂಬುದನ್ನು ಅ.11ರಂದು ಸಾಬೀತುಪಡಿಸಿ ತೋರಿಸುತ್ತೇವೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯರಾಜಕಾರಣದಲ್ಲಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ವಿರೋಧಪಕ್ಷಗಳಿಂದ ಜನಾದೇಶ ಮೀರಿ ಸರಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಸುತ್ತಿರುವುದಾಗಿ ಆರೋಪಿಸಿದರು.
ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆಯೇ ಇಲ್ಲ. ಕಾಂಗ್ರೆಸ್, ಜನತಾದಳದ ದುರಾಡಳಿತದಿಂದ ಬೇಸತ್ತು ರಾಜ್ಯದ ಜನತೆ ಬಿಜೆಪಿಗೆ ಅಧಿಕಾರದ ಗದ್ದುಗೆ ನೀಡಿದ್ದಾರೆ. ಆದರೆ ಅಧಿಕಾರ ಇಲ್ಲದೆ ಒದ್ದಾಡುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಕೀಳು ಮಟ್ಟದ ರಾಜಕೀಯ ಮಾಡುವ ಮೂಲಕ ಗೊಂದಲವನ್ನು ಹುಟ್ಟುಹಾಕಿರುವುದಾಗಿ ದೂರಿದರು.
ಆದರೆ ಅವರ ಯಾವುದೇ ತಂತ್ರಗಾರಿಕೆ ಫಲಿಸುವುದಿಲ್ಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರಥ್ಯದಲ್ಲಿ ಐದು ವರ್ಷಗಳ ಪೂರ್ಣ ಆಡಳಿತ ನಡೆಸುವುದು ಖಚಿತ. ಉಳಿದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಮಾಡಲು ಶಕ್ತಿಮೀರಿ ಶ್ರಮಿಸಲಾಗುವುದು. ನಂತರ ಮತ್ತೆ ಚುನಾವಣೆಯಲ್ಲಿ ಸುಮಾರು 150 ಶಾಸಕರನ್ನು ಗೆಲ್ಲಿಸುವ ಮೂಲಕ ರಾಜ್ಯವನ್ನು ದೇಶದಲ್ಲಿಯೇ ನಂಬರ್ ವನ್ ಮಾಡುವ ಗುರಿ ಹೊಂದಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಹಣದ ಆಮಿಷ: ಬಿಜೆಪಿಯಲ್ಲಿನ ಕೆಲವು ಅತೃಪ್ತ ಶಾಸಕರಿಗೆ ಜೆಡಿಎಸ್, ಕಾಂಗ್ರೆಸ್ ಹಣದ ಆಮಿಷ ಒಡ್ಡಿ ಸರಕಾರವನ್ನು ಬೀಳಿಸುವ ತಂತ್ರಕ್ಕೆ ಮುಂದಾಗಿರುವುದಾಗಿ ಈಶ್ವರಪ್ಪ ಆರೋಪಿಸಿದರು. ನಾವು ಒಂದೇ ಒಂದು ರೂಪಾಯಿ ಹಣ ಯಾರಿಗೂ ಕೊಟ್ಟಿಲ್ಲ ಅಂತ ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಆದರೆ ನೀವು ಬಿಜೆಪಿ ಶಾಸಕರನ್ನು ಹಣ ಕೊಟ್ಟು ಖರೀದಿಸಲು ಮುಂದಾಗಿಲ್ಲ ಅಂತ ದೇವರು, ಅಪ್ಪ-ಅಮ್ಮನ ಮೇಲೆ ಪ್ರಮಾಣ ಮಾಡಿ ಹೇಳುತ್ತೀರಾ ಎಂದು ಕುಮಾರಸ್ವಾಮಿ ಅವರ ಹೆಸರನ್ನು ಹೇಳದೆ ಪರೋಕ್ಷವಾಗಿ ಸವಾಲು ಹಾಕಿದರು.
ತಾವೇ ಬಿಜೆಪಿ ಸಚಿವರಿಗೆ ಹಣದ ಆಮಿಷ ಒಡ್ಡಿ ಸರಕಾರವನ್ನು ಉರುಳಿಸುವ ಸಂಚು ನಡೆಸಿ, ನಂತರ ಬಿಜೆಪಿಯವರೇ ಕಾಂಗ್ರೆಸ್, ಜೆಡಿಎಸ್ ಪಕ್ಷದ ಶಾಸಕರಿಗೆ ಹಣದ ಆಮಿಷ ಒಡ್ಡಿರುವುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಏನೇ ತಿಪ್ಪರಲಾಗ ಹಾಕಿದರು ಸರಕಾರ ಉರುಳಿಸುವ ನಿಮ್ಮ ಕನಸು ಈಡೇರುವುದಿಲ್ಲ ಎಂದು ಕಾಂಗ್ರೆಸ್, ಜೆಡಿಎಸ್ ಮುಖಂಡರಿಗೆ ಟಾಂಗ್ ಕೊಟ್ಟಿರುವ ಈಶ್ವರಪ್ಪ, ಬಿಜೆಪಿ ಸರಕಾರ ಸುಭದ್ರವಾಗಿದೆ. ಅ.11ರಂದು ಬಹುಮತ ಸಾಬೀತುಪಡಿಸುವುದು ಖಚಿತ ಎಂದರು.