ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಗರಣಗಳ ಬಗ್ಗೆ ಮುಕ್ತ ಚರ್ಚೆ ಆಗಲಿ: ಮಲ್ಲಿಕಾರ್ಜುನ ಖರ್ಗೆ (Mallikarjun kharghe | Land scame | BJP | Yeddyurappa | Congress)
Bookmark and Share Feedback Print
 
ಭೂ ಹಗರಣ ಸೇರಿದಂತೆ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಮುಕ್ತ ಚರ್ಚೆ ಆಯೋಜಿಸಲಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.

ಈ ಪ್ರಕರಣಗಳ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲಾಗುತ್ತಿದ್ದು, ತಮಗೂ ಆಹ್ವಾನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ತಾವು ಈ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿವೇಶನದಲ್ಲಿ ತಮಗೆ ಮಾತನಾಡುವ ಅವಕಾಶವೂ ಇಲ್ಲ. ಅಲ್ಲೇನು ತಮಾಷೆ ನೋಡಲು ಹೋಗಬೇಕೆ ಎಂದು ಖಾರವಾಗಿ ಪ್ರಶ್ನಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖರ್ಗೆ, ಸಂಸತ್‌ನಲ್ಲಿ ಚರ್ಚೆ ನಡೆದರೆ ಯಡಿಯೂರಪ್ಪ ಅಥವಾ ರಾಜ್ಯದ ಮಂತ್ರಿಗಳು, ಶಾಸಕರು ಬಂದು ಮಾತನಾಡಲು ಆಗುತ್ತಾ ? ಅಲ್ಲಾರಿ ನಾನು ಕೇಂದ್ರ ಸಚಿವನಾಗಿದ್ದು, ರಾಜ್ಯ ಅವೇಶನದಲ್ಲಿ ಪಾಲ್ಗೊಂಡು ಮಾತನಾಡಬಹುದಾ ? ಅದಕ್ಕೆಲ್ಲಿದೆ ಅವಕಾಶ ಎಂದರು.

ಈ ಎಲ್ಲ ಹಗರಣಗಳ ಬಗ್ಗೆ ಚರ್ಚೆ ಆಗಬೇಕೆಂಬ ಕಳಕಳಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗಿದ್ದರೆ ಬಹಿರಂಗ ಚರ್ಚೆ ಆಯೋಜಿಸಲಿ. ಅದನ್ನೆಲ್ಲಾ ಬಿಟ್ಟು ಜನರನ್ನು ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ಆಂತರಿಕ ಕಚ್ಚಾಟದಲ್ಲಿ ಮುಳುಗಿದ್ದು, ಇದನ್ನು ಮರೆಮಾಚಲು ವಿಶೇಷ ಅಧಿವೇಶನದ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆ. ಹೀಗಾಗಿ ತಾವು ರಾಜ್ಯ ರಾಜಕೀಯಕ್ಕೆ ಮರುಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲವನ್ನೂ ಊಹೆ ಆಧಾರದ ಮೇಲೆ ಮಾತನಾಡಲಾಗದು. ಯಾವ ಯಾವ ಸಂದರ್ಭದಲ್ಲಿ ಏನೇನು ನಡೆಯುತ್ತೆ ಎಂಬುದನ್ನು ಆಧರಿಸಿ ಬದಲಾವಣೆಗಳು ಆಗುತ್ತಿರುತ್ತವೆ. ಅಂತೆ-ಕಂತೆ ಬಗ್ಗೆ ಚಿಂತೆ ಬೇಡ ಎಂದರು.
ಸಂಬಂಧಿತ ಮಾಹಿತಿ ಹುಡುಕಿ