ಮಂಗಳೂರು/ಕೇರಳ, ಗುರುವಾರ, 7 ಅಕ್ಟೋಬರ್ 2010( 17:31 IST )
ಸರಕಾರಕ್ಕೆ ಎದುರಾಗಿರುವ ಕಂಟಕದಿಂದ ಪಾರು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಕೇರಳದ ತಳಿಪರಂಬುವಿನಲ್ಲಿರುವ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ಮೊರೆ ಹೋಗಿದ್ದಾರೆ.
ಪಕ್ಷದೊಳಗೆ ಸ್ಫೋಟಗೊಂಡಿರುವ ಭಿನ್ನಮತ ಶಮನಗೊಳಿಸುವ ಯತ್ನ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಯಡಿಯೂರಪ್ಪನವರು ದೇವರ ಮೊರೆ ಹೋಗಿ ವಿಘ್ನ ನಿವಾರಿಸಪ್ಪ ಎಂದು ಪೂಜೆ ಸಲ್ಲಿಸಿದ್ದಾರೆ.
ಇಂದು ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ವಿವರಿಸಿ, ಸಚಿವರಾದ ಆನಂದ್ ಅಸ್ನೋಟಿಕರ್ ಮತ್ತು ಬಾಲಚಂದ್ರ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಶಿಫಾರಸು ಪತ್ರ ನೀಡಿ ದೇವರ ದರ್ಶನಕ್ಕೆ ತೆರಳಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಸಚಿವ ರಾಮಚಂದ್ರಗೌಡ, ಸಂಸದ ರಾಘವೇಂದ್ರ, ನಳಿನ್ ಕುಮಾರ್ ಕಟೀಲ್ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ವಿಪ್ ಜಾರಿ: ಅಕ್ಟೋಬರ್ 11ರಂದು ಬೆಳಿಗ್ಗೆ ನಡೆಯಲಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸದನದಲ್ಲಿ ಕಡ್ಡಾಯವಾಗಿ ಹಾಜರಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ಮತ ಚಲಾಯಿಸುವಂತೆ ವಿಪ್ ಜಾರಿಗೊಳಿಸುವುದಾಗಿ ಸರಕಾರದ ಮುಖ್ಯ ಸಚೇತಕ ಜೀವರಾಜ್ ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಎಲ್ಲ ಶಾಸಕರು ಕಡ್ಡಾಯವಾಗಿ ಸರಕಾರದ ಪರವಾಗಿ ಮತ ಚಲಾಯಿಸುವಂತೆ ಕಟ್ಟಾಜ್ಞೆ ನೀಡಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು. ಬಿಜೆಪಿ ಚಿಹ್ನೆಯಡಿ ಆಯ್ಕೆಯಾಗಿರುವ 117 ಮಂದಿ ಶಾಸಕರು ಹಾಗೂ ಐದು ಮಂದಿ ಸಹ ಸದಸ್ಯರಿಗೆ ಈ ವಿಪ್ ಜಾರಿಗೊಳಿಸಲಾಗುವುದು ಎಂದರು.
ಬಿಜೆಪಿ ಕೆಲ ಶಾಸಕರು ಹೊರ ರಾಜ್ಯದಲ್ಲಿ ಇದ್ದಾರಲ್ಲ ಅವರಿಗೆ ಯಾವ ರೀತಿ ವಿಪ್ ಜಾರಿ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅತೃಪ್ತ ಶಾಸಕರು ನಮ್ಮವರೇ, ಅವರ ಮನೆ ಮೊಬೈಲ್ ಸಂಖ್ಯೆಗಳಿಗೆ ವಿಪ್ ಜಾರಿ ಸಂದೇಶ ರವಾನಿಸಲಾಗುವುದು ಎಂದು ಹೇಳಿದರು.