ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆಳ್ಳುಬ್ಬಿ, ರಾಜೂಗೌಡ ಮರಳಿ ಗೂಡಿಗೆ: ರೆಡ್ಡಿಗೆ ಸಂಧಾನದ ಸಾರಥ್ಯ! (Bellubbay | Raju gowda | Janardana Reddy | BJP | Yeddyurappa)
Bookmark and Share Feedback Print
 
WD
ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಸರಕಾರ ಪತನವಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದು, ಅದಕ್ಕೆ ಬೇಕಾದ ಎಲ್ಲಾ ರೀತಿಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಆ ಬೆಳವಣಿಗೆಯ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಎಸ್.ಕೆ.ಬೆಳ್ಳುಬ್ಬಿ ಮತ್ತು ರಾಜು ಗೌಡ ಗುರುವಾರ ವಾಪಸ್ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.

ಬಂಡಾಯದ ಕಹಳೆ ಮೊಳಗಿಸಿದ್ದ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಎಸ್.ಕೆ.ಬೆಳ್ಳುಬ್ಬಿ ಇಂದು ಬೆಳಿಗ್ಗೆ ದಿಢೀರನೆ ಸಚಿವ ಜನಾರ್ದನ ರೆಡ್ಡಿ ಅವರೊಂದಿಗೆ ಆರೋಗ್ಯ ಸಚಿವ ಶ್ರೀರಾಮುಲು ಅವರ ಮನೆಯಲ್ಲಿ ಪ್ರತ್ಯಕ್ಷರಾಗಿದ್ದರು. ತಾನು ಮುಖ್ಯಮಂತ್ರಿಗಳಿಗೆ ನಿಷ್ಠನಾಗಿದ್ದು,ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ತೆಗೆದುಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದರು.

ತದನಂತರ ಭಿನ್ನರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಸುರಪುರ ಶಾಸಕ ರಾಜೂ ಗೌಡ ಕೂಡ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸಕ್ಕೆ ಆಗಮಿಸಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ತಾವು ಯಾವುದೇ ಕಾರಣಕ್ಕೂ ಪಕ್ಷವನ್ನು ತೊರೆಯುವುದಾಗಲಿ, ಬೆಂಬಲ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.

ಶಾಸಕರಾದ ದೊಡ್ಡನಗೌಡ ಪಾಟೀಲ ಮತ್ತು ಬಿ.ಪಿ.ಹರೀಶ್ ಅವರು ಬುಧವಾರ ಬೆಳಿಗ್ಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ರನ್ನು ಭೇಟಿಯಾಗಿ, ಬಿಜೆಪಿ ಸರಕಾರಕ್ಕೆ ಬೆಂಬಲ ಹಿಂತೆಗೆತದ ಪತ್ರವನ್ನು ವಾಪಸ್ ಪಡೆದುಕೊಂಡಿದ್ದರು. ಅಲ್ಲದೆ, ತಮ್ಮ ನಿಷ್ಠೆ ಬಿಜೆಪಿಗೇ ಎಂದು ತಿಳಿಸಿದ್ದರು.

NRB
ಅತೃಪ್ತರ ಬಣದಿಂದ ಐವರು ವಾಪಸ್-ರೆಡ್ಡಿ: ಇಂದು ಸಂಜೆಯೊಳಗೆ ಮತ್ತೆ ಐವರು ಅತೃಪ್ತ ಶಾಸಕರು ವಾಪಸ್ಸಾಗಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿಶ್ವಾಸ ವ್ಯಕ್ತಪಡಿಸಿದ್ದರು. ಬಿಜೆಪಿ ಸರಕಾರ ಸುಭದ್ರವಾಗಿದೆ. ಅ.11ರಂದು ನಡೆಯಲಿರುವ ಬಹುಮತ ಸಾಬೀತಿನ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಯಶಸ್ವಿಯಾಗಲಿದ್ದಾರೆ. ಆಡಳಿತಾರೂಢ ಬಿಜೆಪಿ ಸರಕಾರ ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂದರು.

ಭಿನ್ನರ ಪಾಳಯದಿಂದ ಇಳಿಮುಖವಾಗುತ್ತಿರುವ ಸಂಖ್ಯೆ!: ಅತೃಪ್ತ ಶಾಸಕರ ಗುಂಪಿನಿಂದ ಒಬ್ಬೊಬ್ಬರೇ ಶಾಸಕರು ಯಡಿಯೂರಪ್ಪನವರಿಗೆ ತಮ್ಮ ಬೆಂಬಲ ಸೂಚಿಸುತ್ತಿರುವ ಬೆಳವಣಿಗೆಯಿಂದಾಗಿ ಭಿನ್ನಮತೀಯರ ಪಾಳಯದಲ್ಲಿ ಮಂಕು ಆವರಿಸಿದಂತಾಗಿದೆ. ಸದ್ಯದ ಬಿರುಸಿನ ರಾಜಕೀಯ ಬೆಳವಣಿಗೆಯಲ್ಲಿ ಮೂರು-ನಾಲ್ಕು ದಿನಗಳಲ್ಲಿ ಅತೃಪ್ತ ಶಾಸಕರೆಲ್ಲ ಮರಳಿ ಬಿಜೆಪಿಗೆ ವಾಪಸಾಗುವ ಸಾಧ್ಯತೆ ಇರುವುದಾಗಿ ಬಿಜೆಪಿ ಮೂಲವೊಂದು ವಿಶ್ವಾಸ ವ್ಯಕ್ತಪಡಿಸಿದೆ.

ರೆಸಾರ್ಟ್ ರಾಜಕೀಯ:ಬಿಜೆಪಿ ಸರಕಾರದಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಗೊಳಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ ಪಕ್ಷದ ಶಾಸಕರಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವ ಸಲುವಾಗಿ ರೆಸಾರ್ಟ್ ರಾಜಕೀಯಕ್ಕೆ ಬಿಜೆಪಿ ಮತ್ತೆ ಚಾಲನೆ ನೀಡಿದೆ. ಆ ನಿಟ್ಟಿನಲ್ಲಿ ಬಿಜೆಪಿಯ ಎಲ್ಲ ಶಾಸಕರು ನಗರದ ಹೊರವಲಯದಲ್ಲಿರುವ ಗೋಲ್ಡನ್ ಫಾರ್ಮ್ ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿ ಪ್ರತಿತಂತ್ರ ರೂಪಿಸುತ್ತಿದ್ದಾರೆ.

ಅ.11ರಂದು ನಡೆಯುವ ವಿಧಾನಸಭಾ ಅಧಿವೇಶನದವರೆಗೂ ರೆಸಾರ್ಟ್‌ನಲ್ಲಿಯೇ ಈ ಎಲ್ಲ ಶಾಸಕರು, ಸಚಿವರು ಮೊಕ್ಕಾಂ ಹೂಡಲಿದ್ದು, 11ರಂದು ನೇರವಾಗಿ ರೆಸಾರ್ಟ್‌ನಿಂದಲೇ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.

ಕಾಂಗ್ರೆಸ್ ಪುಣೆಯತ್ತ ಪ್ರಯಾಣ: ಈ ಮೊದಲು ಬಿಜೆಪಿ ಮತ್ತು ಜೆಡಿಎಸ್ ಮಾತ್ರ ರೆಸಾರ್ಟ್ ರಾಜಕೀಯ ಮಾಡುತ್ತಿದ್ದರೆ, ಇದೀಗ ಆ ಸಾಲಿಗೆ ಕಾಂಗ್ರೆಸ್ ಕೂಡ ಸೇರ್ಪಡೆಗೊಂಡಿದೆ. ಕುದುರೆ ವ್ಯಾಪಾರ ತಡೆಯುವ ಹಾಗೂ ಮುಂದಿನ ಕಾರ್ಯತಂತ್ರ ರೂಪಿಸುವ ಸಲುವಾಗಿ ಕಾಂಗ್ರೆಸ್‌ನ ಸುಮಾರು 55 ಮಂದಿ ಶಾಸಕರು ಇಂದು ರಾತ್ರಿ ಪೂನಾಗೆ ತೆರಳುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ.

'ರೆಬೆಲ್‌ಸ್ಟಾರ್ ಟೀಂ' ಗೋವಾದಲ್ಲಿ-ಸಂಧಾನಕ್ಕೆ ಕಸರತ್ತು!:ಅಬಕಾರಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಬಂಡಾಯ ಸಾರಿದ್ದ 14 ಮಂದಿ ಶಾಸಕರ ಬಣ ಇದೀಗ ಗೋವಾದ ಮಡಗಾಂವ್‌ನಲ್ಲಿರುವ ತಾಜ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದೆ. ಬಂಡಾಯ ಶಾಸಕರ ಸಂಧಾನದ ಸಾರಥ್ಯ ವಹಿಸಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಗೋವಾಕ್ಕೆ ದೌಡಾಯಿಸಿದ್ದಾರೆ.
ಸಂಸದ ಪ್ರಭಾಕರ್ ಕೋರೆ

ರೆಸಾರ್ಟ್‌ನಲ್ಲಿ ಎಂ.ಪಿ.ರೇಣುಕಾಚಾರ್ಯ, ವೆಂಕಟರಮಣಪ್ಪ, ಸಾರ್ವಭೌಮ ಬಗಲಿ, ಆನಂದ್ ಅಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ, ನಂಜುಂಡಸ್ವಾಮಿ, ನರೇಂದ್ರಸ್ವಾಮಿ, ವೈ.ಸಂಪಂಗಿ, ಡಿ.ಸುಧಾಕರ್, ಬೇಳೂರು ಗೋಪಾಲಕೃಷ್ಣ, ಶಿವರಾಜ್ ತಂಗಡಗಿ, ರಾಜೂ ಕಾಗೆ, ಗೂಳಿಹಟ್ಟಿ ಶೇಖರ್, ನಾಗರಾಜ್ ಸೇರಿದಂತೆ 14 ಅತೃಪ್ತರು ವಾಸ್ತವ್ಯ ಹೂಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹೈಕಮಾಂಡ್ ನಿರ್ದೇಶನದ ಮೇರೆಗೆ ಜನಾರ್ದನ ರೆಡ್ಡಿ ಸಂಧಾನಕ್ಕಾಗಿ ಗೋವಾಕ್ಕೆ ತೆರಳಿದ್ದು, ಅವರಿಗೆ ಸಂಸದ ಪ್ರಭಾಕರ್ ಕೋರೆ ಸಾಥ್ ನೀಡಿದ್ದಾರೆ. ಆದರೆ ತಾವು ಯಾವುದೇ ಕಾರಣಕ್ಕೂ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿರುವ ವಿಚಾರದಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಸಾರಿದ್ದಾರೆ. ಆ ಹಿನ್ನೆಲೆಯಲ್ಲಿ ರೆಡ್ಡಿ ಸಂಧಾನ ಯಶಸ್ವಿಯಾಗಲಿದೆಯೇ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ