ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಬಿಜೆಪಿ ಶಾಸಕರ ರಕ್ಷಣೆ'ಗೆ ಕುಮಾರಸ್ವಾಮಿ ಗೋವಾಕ್ಕೆ! (Karnataka | Government | BJP | JDS | Kumaraswamy | Janardana Reddy | Yaddyurappa)
Bookmark and Share Feedback Print
 
ಕ್ಷಣ ಕ್ಷಣದ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾದಂತೆ ಮನರಂಜನೆ ನೀಡುತ್ತಿರುವ ರಾಜ್ಯ ಬಿಜೆಪಿಯೊಳಗಿನ ಬಿಕ್ಕಟ್ಟು ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ಭಿನ್ನಮತೀಯರನ್ನು ತಮ್ಮ ತಟ್ಟೆಯೊಳಗೆ ಹಾಕಿಕೊಳ್ಳಲು ಸಚಿವ ಜನಾರ್ದನ ರೆಡ್ಡಿ ಗೋವಾಕ್ಕೆ ಹಾರಿದ ಬೆನ್ನಲ್ಲೇ, 'ನಮ್ಮದೇನೂ ಕೈವಾಡವಿಲ್ಲ' ಎನ್ನುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ, ಸಂಸದ ಎಚ್.ಡಿ.ಕುಮಾರಸ್ವಾಮಿ ಕೂಡ ಗೋವಾಕ್ಕೆ ಹಾರಿದ್ದು, ಬೆಳವಣಿಗೆಗಳಿಗೆ ರೆಕ್ಕೆ-ಪುಕ್ಕ ಮೂಡಿದೆ.

ಇದರೊಂದಿಗೆ, ಕಮಲದೊಳಗಿನ ಆಂತರಿಕ ತುಮುಲದಲ್ಲಿ ಕುಮಾರನ ಕೈವಾಡವಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡಿದ್ದಾರೆ.

ಇದರ ನಡುವೆಯೇ, ಅತೃಪ್ತರ ಭೇಟಿಗೆ ಗೋವಾ ಪೊಲೀಸರು ತನಗೆ ಅಡ್ಡಿಪಡಿಸುತ್ತಿದ್ದಾರೆ, ಸಚಿವನಾಗಿಯೂ ಅಡ್ಡಿಪಡಿಸುತ್ತಿದ್ದಾರೆ. ಬೇಕಿದ್ದರೆ ಅವರು ನನ್ನನ್ನು ಬಂಧಿಸಲಿ ನೋಡೋಣ. ಈ ರಾಜ್ಯದಲ್ಲಿ ಪ್ರಜಾಪ್ರಭುತ್ವವೇ ಇಲ್ಲ, ಪೊಲೀಸ್ ರಾಜ್ಯವಾಗಿದೆ ಎಂದು ಸಂಧಾನಕ್ಕೆ ತೆರಳಿರುವ ಜನಾರ್ದನ ರೆಡ್ಡಿ ಕಿಡಿ ಕಾರಿದ್ದಾರೆ. ಇದರೊಂದಿಗೆ, ಶಾಸಕರಿದ್ದ ಹೊಟೇಲ್ ಸುತ್ತಮುತ್ತ ಸಶಸ್ತ್ರ ಪಡೆಗಳನ್ನೂ ನಿಯೋಜಿಸಲಾಗಿದ್ದು, ಅಲ್ಲಿಗೆ ಬಿಜೆಪಿ ಶಾಸಕರ ಮೊಬೈಲ್ ಫೋನುಗಳನ್ನು ಕಿತ್ತುಕೊಂಡು, ಅವರಿರುವ ಹೋಟೆಲಿಗೆ ದಿಗ್ಬಂಧನ ಮಾಡಿ ದೌರ್ಜನ್ಯ ಮಾಡುತ್ತಿದೆ. ಇದು ಗೋವಾದ ಕಾಂಗ್ರೆಸ್ ಸರಕಾರದ ಸಂಚು ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹಾಗೂ ಮುಖಂಡ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಬುಧವಾರದ ಬೆಳವಣಿಗೆಯಲ್ಲಿ, ಮುಂಬೈಯಿಂದ ಶಿರಡಿ, ಅಲ್ಲಿಂದ ಗೋವಾಕ್ಕೆ ಬಂದು, ಅಲ್ಲಿನ ತಾಜ್ ಎಕ್ಸೋಟಿಕ್ ರೆಸಾರ್ಟ್‌ನಲ್ಲಿ 13 ಮಂದಿ ಬಿಜೆಪಿಯ ಅತೃಪ್ತರು ಬೀಡುಬಿಟ್ಟಿದ್ದು, ರಾಜ್ಯದ ರಾಜಕೀಯದ ಕದನ ಕುತೂಹಲವೆಲ್ಲವೂ ಅತ್ತಕಡೆ ವರ್ಗವಾಗಿತ್ತು.

ಜನಾರ್ದನ ರೆಡ್ಡಿ ಜೊತೆಗೆ ಹಿರಿಯ ಮುಖಂಡರಾದ ಉಮೇಶ್ ಕತ್ತಿ, ಪ್ರಭಾಕರ ಕೋರೆ ಕೂಡ ಇದ್ದಾರೆ.

ನಮಗೆ ಭಿನ್ನಮತೀಯ ಬಿಜೆಪಿ ಶಾಸಕರೊಂದಿಗೆ ಸಂಬಂಧವೇ ಇಲ್ಲ ಎಂದು ಹೇಳಿಕೊಂಡಿದ್ದ ಕುಮಾರಸ್ವಾಮಿ ಇದೀಗ, ಬಂಡಾಯ ಬಿಜೆಪಿ ಶಾಸಕರಿಗೆ ಬಿಜೆಪಿಯಿಂದಲೇ ಜೀವಬೆದರಿಕೆಯಿದ್ದು, ಅವರ ರಕ್ಷಣೆಗಾಗಿ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಎಚ್.ಡಿ.ಕೆ ಜೊತೆ ಶಾಸಕ ಜಮೀರ್ ಅಹ್ಮದ್ ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ಕೂಡ ಇದ್ದಾರೆ.

ಆರಂಭದಲ್ಲಿ, ಜನಾರ್ದನ ರೆಡ್ಡಿಯನ್ನು ಭೇಟಿ ಮಾಡಲು ಅತೃಪ್ತರು ಒಪ್ಪಿಕೊಳ್ಳಲೇ ಇಲ್ಲ ಎಂಬ ವರದಿಗಳು ಬಂದಿದ್ದವು. ಅತ್ತಕಡೆ ಕುಮಾರಸ್ವಾಮಿಯೂ ಬಂದಿರುವುದರಿಂದ ಈ ಜಟಾಪಟಿ ಯಾವ ಮಟ್ಟಕ್ಕೆ ಹೋಗಲಿದೆ ಎಂಬುದು ಕದನಕುತೂಹಲ ಮೂಡಿಸಿದೆ.

ಇದರೊಂದಿಗೆ, ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಕೂಡ ಅತೃಪ್ತ ಶಾಸಕರಿರುವ ರೆಸಾರ್ಟ್‌ಗೆ ಭೇಟಿ ನೀಡಿದ್ದಾರೆ.

ಅ.9ರೊಳಗೆ ಇಬ್ಬರನ್ನು ಬಿಟ್ಟು ಎಲ್ಲರೂ ವಾಪಸ್- ಬಿಜೆಪಿ
ಈ ಮಧ್ಯೆ, ಬೆಂಗಳೂರು ಹೊರವಲಯದ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ವ್ಯೂಹ ಹೆಣೆದ ಬಳಿಕ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಬಿಜೆಪಿ ವಕ್ತಾರ ಪ್ರಹ್ಲಾದ ಜೋಷಿ, ಅಕ್ಟೋಬರ್ 9ನೇ ತಾರೀಕಿನೊಳಗೆ ಒಂದಿಬ್ಬರನ್ನು ಉಳಿದು ಎಲ್ಲ ಬಂಡಾಯ ಬಿಜೆಪಿ ಶಾಸಕರೂ ಯಡಿಯೂರಪ್ಪ ಅವರಿಗೆ ತಮ್ಮ ನಿಷ್ಠೆ ಪ್ರಕಟಿಸಲಿದ್ದು, ಬಲಾಬಲ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ವಿಜಯ ಸಾಧಿಸುತ್ತೇವೆ ಎಂದು ಹೇಳಿದ್ದಾರೆ.

81 ಬಿಜೆಪಿ ಶಾಸಕರು ಗೋಲ್ಡನ್ ಪಾಮ್ ರಿಸಾರ್ಟ್‌ನಲ್ಲಿದ್ದಾರೆ ಎಂದ ಪ್ರಹ್ಲಾದ ಜೋಷಿ, ಒಬ್ಬೊಬ್ಬರಾಗಿ ವಾಪಸಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ, ಬಂಡುಕೋರರೊಂದಿಗೆ ಗುರುತಿಸಿಕೊಂಡಿದ್ದ ಬಿಜೆಪಿ ಶಾಸಕರಾದ ದೊಡ್ಡನಗೌಡ ಪಾಟೀಲ, ಎಸ್.ಕೆ.ಬೆಳ್ಳುಬ್ಬಿ, ಬಿ.ಪಿ.ಹರೀಶ್, ರಾಜು ಗೌಡ ನಿಷ್ಠೆಗೆ ಮರಳಿದ್ದು, ನೆಲಮಂಗಲದ ನಾಗರಾಜ್ ಕೂಡ ಬರಲು ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಪರೇಶನ್ ಭೀತಿ....
ಈ ಮಧ್ಯೆ, ಆಪರೇಶನ್ ಕಮಲದ ಭೀತಿಯಿಂದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ತಮ್ಮ ತಮ್ಮ ಶಾಸಕರನ್ನು ಸಂರಕ್ಷಿಸಿಕೊಳ್ಳಲು ಊರೂರು ಅಲೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಕಾಂಗ್ರೆಸಿಗರು ಪುಣೆಯ ಆಂಬಿ ವ್ಯಾಲಿ ರೆಸಾರ್ಟ್‌ಗೆ ಹೋಗಲು ಚಿಂತನೆ ನಡೆಸಿದ್ದರೆ, ಜೆಡಿಎಸ್ ಶಾಸಕರು ಕೂಡ ಯಾವ ರೆಸಾರ್ಟ್‌ಗೆ ಹೋಗುವುದೆಂದು ಯೋಚಿಸುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಶಂಕರಲಿಂಗೇ ಗೌಡ ವಿಷ ಸೇವನೆ ಯತ್ನ - ಅಪ್ಪ-ಮಗ ಜಟಾಪಟಿ
ಇನ್ನೊಂದು ಹೊಸ ಬೆಳವಣಿಗೆಯಲ್ಲಿ, ಬಿಜೆಪಿ ವಿರುದ್ಧ ಬಂಡಾಯವೆದ್ದಿರುವ ಚಾಮರಾಜನಗರ ಶಾಸಕ ಶಂಕರಲಿಂಗೇ ಗೌಡ ಮತ್ತು ಅವರ ಪುತ್ರನ ನಡುವೆ ಜಟಾಪಟಿಯಾಗಿದ್ದು, ಶಂಕರಲಿಂಗೇಗೌಡರು ವಿಷ ಸೇವನೆ ಯತ್ನವನ್ನೂ ಮಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಬಿಜೆಪಿಯನ್ನು ಬೆಂಬಲಿಸಬೇಕು, ಅದರ ಕೈಬಿಡಬಾರದು ಎಂದು ಮೈಸೂರು ಮಹಾನಗರ ಪಾಲಿಕೆ ಸದಸ್ಯರಾಗಿರುವ ಮತ್ತು ಅಧ್ಯಕ್ಷತೆ ಮೇಲೆ ಕಣ್ಣಿಟ್ಟಿರುವ ಪುತ್ರ ನಂದೀಶ್ ಪ್ರೀತಂ ಅವರು ಅಪ್ಪನಿಗೆ ತಾಕೀತು ಮಾಡಿದ್ದು, ಈ ಸಂದರ್ಭ ಮಾತಿನ ಚಕಮಕಿಯೂ ನಡೆದಿದೆ ಎನ್ನಲಾಗಿದೆ.

ಇದರ ಫಲವಾಗಿ, ನಂದೀಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಶಂಕರಲಿಂಗೇಗೌಡರ ಶಾಸಕರ ಭವನದ ಕಚೇರಿಗೆ ನುಗ್ಗಿದ್ದು, ಪೊಲೀಸರು ಬಂದು ವಾತಾವರಣ ತಿಳಿಸಿಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಮಲದ ಕಲಹ: ಪ್ರಜಾಪ್ರಭುತ್ವದ ಮೇಲೆ ಅತ್ಯಾಚಾರ ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ