ಆಡಳಿತಾರೂಢ ಬಿಜೆಪಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ, ಭಿನ್ನಮತೀಯ ಶಾಸಕರ ನೇತೃತ್ವ ವಹಿಸಿದ್ದ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಗುರುವಾರ ರಾತ್ರಿ ದಿಢೀರ್ ಉಲ್ಟಾ ಹೊಡೆದಿದ್ದು, ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶ ತಮಗೆ ಇಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ನಿಷ್ಠೆ ಎಂಬುದಾಗಿ ಸಾರಿದಂತಾಗಿದೆ.
ಮಡಗಾಂವ್ ರೆಸಾರ್ಟ್‌ನಿಂದ ದೂರವಾಣಿ ಮೂಲಕ ಟಿ.ವಿ.ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವೆಲ್ಲ ಶುಕ್ರವಾರ ಒಟ್ಟಾಗಿ ಬೆಂಗಳೂರಿಗೆ ಬರುತ್ತಿದ್ದೇವೆ. ಸರಕಾರವನ್ನು ಉರುಳಿಸುವ ಪ್ರಯತ್ನ ಮಾಡಲ್ಲ. ಅ.11ರಂದು ವಿಶ್ವಾಸಮತ ಯಾಚಿಸುವ ಸಂದರ್ಭದಲ್ಲಿ ಯಡಿಯೂರಪ್ಪನವರ ನಾಯಕತ್ವವನ್ನು ಬೆಂಬಲಿಸಿ ಮತ ನೀಡಲಿದ್ದೇವೆ ಎಂದು ಹೇಳಿ ರಾಜ್ಯರಾಜಕಾರಣದ ಹಾವು-ಏಣಿ ಆಟಕ್ಕೆ ಮತ್ತೊಂದು ತಿರುವು ನೀಡಿದ್ದಾರೆ.
ನಾವು ಯಾವುದೇ ಬೇಡಿಕೆ ಇಟ್ಟಿಲ್ಲ, ನಮ್ಮಿಂದ ಯಾವುದೇ ಷರತ್ತುಗಳೂ ಇಲ್ಲ. ಏನೆಲ್ಲ ನಡೆಯಿತು ಎನ್ನುವುದನ್ನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವಿವರಿಸುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಗೋವಾದಲ್ಲಿ ಗೂಂಡಾಗಿರಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶ್ವಾಸಮತ ಖಚಿತ-ಯಡಿಯೂರಪ್ಪ: ಅ.11ರಂದು ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ಬಹುಮತವನ್ನು ಸಾಬೀತುಪಡಿಸುವುದು ಖಚಿತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಕೇರಳದ ತಳಿಪರಂಬು ಬಳಿಯ ಪ್ರಸಿದ್ಧ ರಾಜರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷದ ಭಿನ್ನಮತೀಯರ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಹಾಗೂ ಭಿನ್ನಮತೀಯ ಶಾಸಕರು ವಿಶ್ವಾಸಮತ ಯಾಚನೆಯ ದಿನ ಸದನಕ್ಕೆ ಖಂಡಿತಾ ಹಾಜರಾಗುತ್ತಾರೆ. ನಮಗೀಗ ಯಾವುದೇ ಸಮಸ್ಯೆ ಇಲ್ಲ ಎಂದರು.