ಸರಕಾರದ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ ಭಿನ್ನಮತೀಯ ಶಾಸಕರ ನಡುವೆಯೇ ಇದೀಗ ಬಿರುಕು ಕಾಣಿಸಿಕೊಂಡ ಪರಿಣಾಮ ಇದು ಆಡಳಿತಾರೂಢ ಬಿಜೆಪಿ ಸರಕಾರವನ್ನು ಉರುಳಿಸುತ್ತದೋ ಇಲ್ಲವೇ ಉಳಿಸುತ್ತದೆಯೋ ಎಂಬುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ತಮ್ಮ ನಿಷ್ಠೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇರುವುದಾಗಿ ಗುರುವಾರ ರಾತ್ರಿ ಹೇಳಿಕೆ ನೀಡುವ ಮೂಲಕ ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಸಚಿವ ರೇಣುಕಾಚಾರ್ಯ ಯೂ ಟರ್ನ್ ತೆಗೆದುಕೊಂಡಿದ್ದರು. ಆದರೆ ಅವರ ಆಪ್ತಸ್ನೇಹಿತ ಬೇಳೂರು ಗೋಪಾಲಕೃಷ್ಣ ಅವರು ಮಾತುಕತೆ ಮುಂದುವರಿದಿರುವುದಾಗಿ ತಿಳಿಸಿದ್ದಾರೆ ಎಂದಿರುವುದು ಭಿನ್ನರಲ್ಲಿಯೇ ಬಿರುಕು ಮುಂದುವರಿದಿರುವುದು ಸ್ಪಷ್ಟವಾಗಿದೆ.
ಶುಕ್ರವಾರ ಎಲ್ಲಾ ಶಾಸಕರೊಂದಿಗೆ ಬೆಂಗಳೂರಿಗೆ ಹಾಜರಾಗುವುದಾಗಿ ರೇಣುಕಾಚಾರ್ಯ ಪ್ರಕಟಿಸಿದ್ದಾರೆ. ಆ ನಿಟ್ಟಿನಲ್ಲಿ ಇಂದು ರೇಣುಕಾಚಾರ್ಯ ಶಾಸಕರೊಂದಿಗೆ ಹಾಜರಾಗುತ್ತಾರೆಯೇ? ಅಥವಾ ಗೋವಾದಲ್ಲಿಯೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಜೊತೆಯೇ ಪ್ರತ್ರಿಕಾಗೋಷ್ಠಿ ನಡೆಸಿ ತಮ್ಮ ನಿರ್ಧಾರ ಪ್ರಕಟಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಒಂದು ವೇಳೆ ಸಚಿವ ರೇಣುಕಾಚಾರ್ಯ ತಮ್ಮ ಆಪ್ತ ಶಾಸಕರೊಂದಿಗೆ ಆಗಮಿಸಿ ಯಡಿಯೂರಪ್ಪನವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದರೆ ಅಲ್ಪಮತಕ್ಕೆ ಇಳಿದ ಸರಕಾರಕ್ಕೆ ಮತ್ತೆ ಬಲಬಂದಂತಾಗುತ್ತದೆ. ಆ ನೆಲೆಯಲ್ಲಿ ಮತ್ತೊಂದೆಡೆ ಕುಮಾರಸ್ವಾಮಿ ಮತ್ತು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಭಿನ್ನಮತೀಯರನ್ನು ತಮ್ಮತ್ತ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಇದು ಮುಂದಿನ ವಿದ್ಯಮಾನಗಳ ಬಗ್ಗೆ ತೀವ್ರ ಕುತೂಹಲ ಮೂಡಿಸುವಂತೆ ಮಾಡಿದೆ.