ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೇಣುಕಾ ಸೇರಿ 11 ಮಂದಿಗೆ ನೋಟಿಸ್:ಗೋವಾದಲ್ಲಿ ಎಚ್‌ಡಿಕೆ ಕಸರತ್ತು! (Karnataka crisis | Kumaraswamy | Janardana Reddy | Goa | Congress)
Bookmark and Share Feedback Print
 
NRB
ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಬಂಡೆದ್ದ ಅಬಕಾರಿ ಸಚಿವ ರೇಣುಕಾಚಾರ್ಯ ಸೇರಿದಂತೆ ಅತೃಪ್ತ 11 ಮಂದಿ ಬಿಜೆಪಿ ಶಾಸಕರಿಗೆ ಅಕ್ಟೋಬರ್ 10ರೊಳಗೆ ಉತ್ತರ ನೀಡುವಂತೆ ಕೇಳಿ ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಶುಕ್ರವಾರ ನೋಟಿಸ್ ಜಾರಿ ಮಾಡಿದ್ದಾರೆ.

ಅತೃಪ್ತ ಶಾಸಕರಲ್ಲಿ ಕಾರಣ ಕೇಳಿ ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಎಸ್.ಬಿ.ಪಾಟೀಲ್ ಅವರು ಇಂದು 11 ಮಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಶಾಸಕರ ಭವನದ ಕೋಣೆ ಮತ್ತು ಅತೃಪ್ತ ಶಾಸಕರ ಮನೆ ಬಾಗಿಲಿಗೆ ಈ ನೋಟಿಸ್ ಅಂಟಿಸಲಾಗಿದೆ.

'ನೀವು ಬಿಜೆಪಿ ಪಕ್ಷದ ಚಿಹ್ನೆಯಡಿ ಆಯ್ಕೆಯಾದವರು. ಹಾಗಾಗಿ ನಿಮ್ಮ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯ ಕ್ರಮ ಯಾಕೆ ಕೈಗೊಳ್ಳಬಾರದು' ಎಂದು ನೋಟಿಸ್‌ನಲ್ಲಿ ಪ್ರಶ್ನಿಸಿದ್ದು, ಈ ಬಗ್ಗೆ ಅ.10ರ ರಾತ್ರಿಯೊಳಗೆ ಸ್ಪಷ್ಟ ಉತ್ತರ ನೀಡುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ.

ಸ್ಪೀಕರ್ ಈ ಹಂತದಲ್ಲಿ ನೋಟಿಸ್ ನೀಡಬಹುದೇ?: ಅತೃಪ್ತ 11 ಮಂದಿ ಬಿಜೆಪಿ ಶಾಸಕರಿಗೆ ನೋಟಿಸ್ ಜಾರಿ ಮಾಡಿರುವುದು ಕೂಡ ರಾಜಕೀಯ ವಲಯದಲ್ಲಿ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗತೊಡಗಿದೆ. ಇದು ಹೊರಗಡೆ ನಡೆಯುತ್ತಿರುವ ಚಟುವಟಿಕೆಯಾಗಿದ್ದರಿಂದ ಈ ಸಂದರ್ಭದಲ್ಲಿ ನೋಟಿಸ್ ನೀಡುವುದು ಸರಿಯಾಗುವುದಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ. ವಿಶ್ವಾಸಮತ ಸಾಬೀತು ಪಡಿಸುವ ನಿಟ್ಟಿನಲ್ಲಿ ಪಕ್ಷ ಮುಖ್ಯ ಸಚೇತಕರ ಮೂಲಕ ವಿಪ್ ಜಾರಿ ಮಾಡಬೇಕಾಗುತ್ತದೆ. ಹಾಗೆ ವಿಪ್ ತೆಗೆದುಕೊಂಡವರು ವಿಧಾನಸಭಾ ಕಲಾಪದಲ್ಲಿ ವಿಶ್ವಾಸಮತ ಚಲಾಯಿಸುವ ಸಂದರ್ಭದಲ್ಲಿ ಗೈರು ಹಾಜರಾದರೆ ಅಥವಾ ಪಕ್ಷದ ವಿರುದ್ಧ ಮತ ಚಲಾಯಿಸಿದರೆ ಅವರ ವಿರುದ್ಧ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಗೋವಾದಲ್ಲಿ ಎಚ್‌ಡಿಕೆ-ಜನಾರ್ದನ ರೆಡ್ಡಿ ಸರ್ಕಸ್: ಗೋವಾದ ತಾಜ್ ಎಕ್ಸೋಟಿಕಾ ಹೋಟೆಲ್‌ನಲ್ಲಿ ಠಿಕಾಣಿ ಹೂಡಿರುವ ಬಿಜೆಪಿ ಅತೃಪ್ತ ಶಾಸಕರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ತಡರಾತ್ರಿ ಸಾಕಷ್ಟು ರಾದ್ಧಾಂತದ ನಂತರವೂ ಭೇಟಿಯಾಗಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

NRB
ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಗೋವಾಕ್ಕೆ ತೆರಳಿದ್ದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿಗೆ ಮಾತ್ರ ತಮ್ಮದೇ ಪಕ್ಷದ ಶಾಸಕರ ಜತೆ ಸಂಧಾನ ನಡೆಸಲು ಸಾಧ್ಯವಾಗದಿರುವುದು ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಗೋವಾದ ಕಾಂಗ್ರೆಸ್ ಮುಖಂಡರು ಸೇರಿದಂತೆ ಗೃಹ ಸಚಿವ ರವಿ ನಾಯಕ್ ಅವರ ಬಿಜೆಪಿ ಶಾಸಕರ ಜೊತೆ ಮಾತನಾಡದಂತೆ ತಡೆದಿರುವುದಾಗಿ ರೆಡ್ಡಿ ಕಿಡಿಕಾರಿದ್ದಾರೆ.

'ನಮ್ಮ ಶಾಸಕರು ಗೃಹ ಬಂಧನದಲ್ಲಿದ್ದಾರೆ, ಇದು ನಿಜಕ್ಕೂ ತುಂಬಾ ಕೆಟ್ಟ ಬೆಳವಣಿಗೆ. ಈ ಎಲ್ಲಾ ಚಟುವಟಿಕೆಗಳನ್ನು ಇಡೀ ದೇಶವೇ ಗಮನಿಸುತ್ತಿದೆ' ಎಂದು ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಕುಮಾರಸ್ವಾಮಿ ಅವರು ರೇಣುಕಾಚಾರ್ಯ ನೇತೃತ್ವದಲ್ಲಿ ಅತೃಪ್ತ ಶಾಸಕರ ಜೊತೆ ಎರಡನೇ ಸುತ್ತಿನ ಮಾತುಕತೆ ನಡೆಸಿರುವುದಾಗಿಯೂ ಮೂಲವೊಂದು ತಿಳಿಸಿದೆ.

ರೆಡ್ಡಿ ಜೊತೆಗೂ ರೇಣುಕಾಚಾರ್ಯ ಬಣ ಮಾತುಕತೆ: ಅತೃಪ್ತ ಬಿಜೆಪಿ ಶಾಸಕರ ಜೊತೆ ತನಗೆ ಮಾತನಾಡಲು ಗೋವಾ ಕಾಂಗ್ರೆಸ್ ಮುಖಂಡರು ಅಡ್ಡಗಾಲು ಹಾಕಿರುವುದಾಗಿ ಆರೋಪಿಸಿದ್ದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಕೊನೆಗೂ ರೇಣುಕಾಚಾರ್ಯ ನೇತೃತ್ವದ ಬಣದ ಜೊತೆಗೆ ಮಾತುಕತೆ ನಡೆಸಿದ್ದಾರೆ. ಒಟ್ಟಾರೆ ಗೋವಾ ರೆಸಾರ್ಟ್‌ನಲ್ಲಿ ಅತೃಪ್ತ ಶಾಸಕರು ಕುಮಾರಸ್ವಾಮಿ ಹಾಗೂ ರೆಡ್ಡಿ ಜೊತೆಗೂ ಮಾತುಕತೆ ನಡೆಸುತ್ತಾರೆ. ಆದರೆ ಅತೃಪ್ತ ಶಾಸಕರು ಯಾರಿಗೆ ತನ್ನ ಒಲವು ವ್ಯಕ್ತಪಡಿಸುತ್ತಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.

ಅತೃಪ್ತರು ವಾಪಸಾಗುತ್ತಾರೆ-ಪಾರಿಕ್ಕಾರ್: ಕರ್ನಾಟಕ ರಾಜ್ಯರಾಜಕಾರಣದಲ್ಲಿ ತಲೆದೋರಿರುವ ಬಿಕ್ಕಟ್ಟು ಶನಿವಾರದೊಳಗೆ ಬಗೆಹರಿಯಲಿದೆ ಎಂದು ಗೋವಾದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಮನೋಹರ್ ಪಾರಿಕಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಈಗಾಗಲೇ ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸಿದ್ದು, ಅವರ ನಿರ್ಧಾರ ತಿಳಿಸಲು ಕಾಲಾವಕಾಶ ನೀಡಲಾಗಿದೆ. ಆ ನಿಟ್ಟಿನಲ್ಲಿ ಭಿನ್ನಮತೀಯ ಶಾಸಕರು ಮರಳಿ ಬಿಜೆಪಿ ಬೆಂಬಲ ನೀಡಲಿರುವ ವಿಶ್ವಾಸ ಇರುವುದಾಗಿ ಹೇಳಿದರು. ಅತೃಪ್ತ ಶಾಸಕರು ಅಕ್ಟೋಬರ್ 11ರಂದು ನಡೆಯಲಿರುವ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ತಮ್ಮ ಬೆಂಬಲವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ನೀಡಲಿದ್ದಾರೆ ಎಂದು ಪಾರಿಕ್ಕಾರ್ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ