ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಕಾಲ್‌ಸೆಂಟರ್ ಉದ್ಯೋಗಿ ಪ್ರತಿಭಾ ಶ್ರೀಕಾಂತಮೂರ್ತಿ ಹತ್ಯಾ ಪ್ರಕರಣದ ಆರೋಪಿ ಶಿವಕುಮಾರ್‌ಗೆ 11ನೇ ತ್ವರಿತ ನ್ಯಾಯಾಲಯ ಶುಕ್ರವಾರ ಸಾಯುವವರೆಗೂ ಜೀವಾವಧಿ ಶಿಕ್ಷೆಯ ತೀರ್ಪನ್ನು ವಿಧಿಸಿದೆ.
2005ರ ಡಿಸೆಂಬರ್ 13ರಂದು ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಶ್ರೀಕಂಠಮೂರ್ತಿ (32) ಅವರನ್ನು ಕಚೇರಿಗೆಂದು ಮನೆಯಿಂದ ಕಾರಿನಲ್ಲಿ ಕರೆದುಕೊಂಡು ಹೋದ ಕಾರು ಚಾಲಕ ಶಿವಕುಮಾರ್ ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಅಂಜನಾಪುರ ಲೇಔಟ್ ಬಳಿ ಎಸೆದು ಹೋಗಿದ್ದ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು.
ಬುಧವಾರ ನಗರದ 11ನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ.ಗುದಲಿ, ಶಿವಕುಮಾರ್‌ನನ್ನು (ಐಪಿಸಿ 366, 376 ಮತ್ತು 302ರ ಅನ್ವಯ) ದೋಷಿ ಎಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ಹೇಳಿದ್ದರು.
ವಿಚಾರಣೆ ಸಂದರ್ಭದಲ್ಲಿ ಶಿವಕುಮಾರ್ ಪ್ರಕರಣದ ಅಪರಾಧಿ ಎಂದು ನ್ಯಾಯಾಧೀಶರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ನಾನು ಏನನ್ನೂ ಮಾಡಿಲ್ಲ, ವಿವಾಹಿತನಾಗಿರುವ ನನ್ನ ಮೇಲೆ ಕುಟುಂಬದ ಜವಾಬ್ದಾರಿ ಇದ್ದು, ಕಡಿಮೆ ಪ್ರಮಾಣದ ಶಿಕ್ಷೆ ನೀಡಿ ಎಂದು ಮನವಿ ಮಾಡಿಕೊಂಡಿದ್ದ.
ತೀರ್ಪು ಸಮಾಧಾನ ತಂದಿದೆ-ಗೌರಮ್ಮ: ತಮ್ಮ ಮಗಳನ್ನು ಹತ್ಯೆಗೈದ ಆರೋಪಿ ಶಿವಕುಮಾರ್‌ಗೆ ನ್ಯಾಯಾಲಯ ನೀಡಿರುವ ತೀರ್ಪು ಸಮಾಧಾನ ತಂದಿದೆ ತಾಯಿ ಗೌರಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಆತನಿಗೆ ಕ್ಷಮಾದಾನ ನೀಡಬಾರದು ಎಂದು ಒತ್ತಾಯಿಸಿರುವ ಅವರು, ಸನ್ನಡೆತೆಯ ಆಧಾರದ ಮೇಲೂ ಆತನನ್ನು ಬಿಡುಗಡೆ ಮಾಡಬಾರದು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಪತಿ ಮನೆಗೆ ಬಾರದಿದ್ದರೆ ವಿಷ ಕುಡಿಯುತ್ತೇನೆ-ಶಿವಕುಮಾರ್ ಪತ್ನಿ: ಗಂಡ ಮನೆಗೆ ಬಾರದಿದ್ದರೆ ತಾನು ವಿಷ ಕುಡಿದು ಸಾಯುವುದಾಗಿ ಆರೋಪಿ ಶಿವಕುಮಾರ್ ಪತ್ನಿ ಸುಮಾ ಬೆದರಿಕೆ ಹಾಕಿದ ಘಟನೆಯೂ ಕೋರ್ಟ್ ಆವರಣದಲ್ಲಿ ನಡೆಯಿತು. ನನಗೆ ನನ್ನ ಗಂಡ ಬೇಕು, ನೀವು ನನ್ನ ಸಾಕುತ್ತೀರಾ ಎಂದು ಸುಮಾ ಮಾಧ್ಯಮ ಪ್ರತಿನಿಧಿಗಳ ಮೇಲೆಯೂ ಹರಿಹಾಯ್ದ ಪ್ರಸಂಗವೂ ನಡೆಯಿತು.