ಸ್ಪೀಕರ್ ಅವರನ್ನು ಹೊರತು ಪಡಿಸಿ 116 ಮಂದಿಗೂ ಶುಕ್ರವಾರ ಮಧ್ಯಾಹ್ನದಿಂದಲೇ ಅನ್ವಯವಾಗುವಂತೆ ವಿಪ್ ಜಾರಿ ಮಾಡಲಾಗಿದೆ. ಆ ನಿಟ್ಟಿನಲ್ಲಿ ಅಕ್ಟೋಬರ್ 11ರಂದು ನಡೆಯಲಿರುವ ವಿಶ್ವಾಸಮತ ಸಾಬೀತಿನ ಸಂದರ್ಭದಲ್ಲಿ ಪಕ್ಷದ ಶಾಸಕರು ಕಡ್ಡಾಯವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿಯೇ ಮತ ಚಲಾಯಿಸುವ ನಿಟ್ಟಿನಲ್ಲಿ ವಿಪ್ ಜಾರಿಗೊಳಿಸಿರುವುದಾಗಿ ಸ್ಪಷ್ಟಪಡಿಸಿದರು. ಆ ಕಾರಣಕ್ಕಾಗಿ ಶಾಸಕರ ಮೊಬೈಲ್, ಅವರ ನಿವಾಸದ ವಿಳಾಸಕ್ಕೆ ವಿಪ್ ಜಾರಿ ಮಾಡಲಾಗಿದೆ ಎಂದು ಜೀವರಾಜ್ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ನಾಟಕದ ಹಿಂದೆ ಜೆಡಿಎಸ್ ಕೈವಾಡ, ಕಾಂಗ್ರೆಸ್ ಅಲ್ಲ-ಸಿಎಂ: ಎಲ್ಲಾ ಅತೃಪ್ತ ಶಾಸಕರು ಇಂದು ಸಂಜೆಯೊಳಗೆ ವಾಪಸ್ ಆಗಲಿದ್ದಾರೆ. ಅತೃಪ್ತ ಶಾಸಕರೆಲ್ಲರೂ ನನ್ನ ಸಂಪರ್ಕದಲ್ಲಿಯೇ ಇದ್ದಾರೆ. ಬಂಡಾಯ ಹೂಡಿದ ಎಲ್ಲಾ ಶಾಸಕರು ಸರಕಾರ ಉಳಿಯಬೇಕು. ಆ ನಿಟ್ಟಿನಲ್ಲಿ ನಿಮಗೆ ಬೆಂಬಲ ನೀಡುತ್ತೇವೆ ಎಂಬ ಭರವಸೆ ನೀಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಆದರೆ ರಾಜ್ಯರಾಜಕಾರಣದಲ್ಲಿ ಈ ರೀತಿಯ ಗೊಂದಲದ ಸ್ಥಿತಿ ನಿರ್ಮಾಣವಾಗಲು ಜೆಡಿಎಸ್ ಪಕ್ಷವೇ ಪ್ರಮುಖ ಕಾರಣ ವಿನಃ, ಕಾಂಗ್ರೆಸ್ ಅಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು. ವಾಮಮಾರ್ಗದಿಂದ ಅಧಿಕಾರ ಹಿಡಿಯುವ ಆಸಕ್ತಿ ಕಾಂಗ್ರೆಸ್ ಮುಖಂಡರಿಗೆ ಇಲ್ಲ. ಆದರೆ ಜೆಡಿಎಸ್ ಹಿಂಬಾಗಿಲಿನಿಂದ ಬಂದು ಮತ್ತೆ ಅಧಿಕಾರದ ಗದ್ದುಗೆ ಏರುವ ಕೀಳುಮಟ್ಟದ ರಾಜಕೀಯ ಇಳಿದಿದೆ ಎಂದು ಆರೋಪಿಸಿದ ಅವರು, ಕುಮಾರಸ್ವಾಮಿಯವರೇ, ರೇವಣ್ಣ, ದೇವೇಗೌಡರೇ ಈ ಮೊದಲು ಇಂತಹದ್ದೇ ರಾಜಕೀಯ ಮಾಡಿದ್ದೀರಿ. ಇನ್ನು ಮುಂದಾದರೂ ಅಂತಹ ಚಾಳಿಯನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡರು.
NRB
ಏನೇ ಆದರೂ ಅತೃಪ್ತ ಶಾಸಕರು ನಮಗೆ ಬೆಂಬಲ ನೀಡುತ್ತಾರೆ. ಅಕ್ಟೋಬರ್ 11ರಂದು ವಿಶ್ವಾಸಮತ ಸಾಬೀತು ಪಡಿಸುವ ದಿನದಂದು ನಿರೀಕ್ಷೆಗೂ ಮೀರಿ ಬಹುಮತ ಸಾಬೀತುಪಡಿಸುವುದಾಗಿ ಮುಖ್ಯಮಂತ್ರಿಗಳು ವಿಶ್ವಾಸವ್ಯಕ್ತಪಡಿಸಿದರು.
ಪ್ರಹಸನದ ಸೂತ್ರಧಾರಿ ಕಾಂಗ್ರೆಸ್, ಪಾತ್ರಧಾರಿ ಜೆಡಿಎಸ್-ನಾಯ್ಡು: ಬಿಜೆಪಿ ಸರಕಾರ ಉರುಳಿಸುವ ನಾಟಕದಲ್ಲಿ ಕಾಂಗ್ರೆಸ್ ಸೂತ್ರಧಾರಿಯಾಗಿದ್ದು, ಜೆಡಿಎಸ್ ಪಾತ್ರಧಾರಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಮುಖಂಡ ವೆಂಕಯ್ಯ ನಾಯ್ಡು ತೀವ್ರ ವಾಗ್ದಾಳಿ ನಡೆಸಿದ್ದಾರೆ.ಬಿಕ್ಕಟ್ಟು ಪಕ್ಷದ ಆಂತರಿಕ ವಿಷಯವಾಗಿದ್ದು, ಇದಕ್ಕೆ ಕಾಂಗ್ರೆಸ್, ಜೆಡಿಎಸ್ ಮುಖಂಡರು ಮೂಗು ತೂರಿಸುವ ಅಗತ್ಯವಿಲ್ಲ. ನಮ್ಮ ಶಾಸಕರಿಗೆ ಭದ್ರತೆ ನೀಡಲು ಕುಮಾರಸ್ವಾಮಿ ಯಾರು ಎಂದು ಪ್ರಶ್ನಿಸಿದರು.
ಬಿಜೆಪಿ ಸರಕಾರ ಉರುಳಿಸಲು ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿರುವುದು ಸ್ಪಷ್ಟ. ಯಾಕೆಂದರೆ ಗೋವಾ ಕಾಂಗ್ರೆಸ್ ಮುಖಂಡರು ನಮ್ಮ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇಕೆ? ಅದಕ್ಕಿಂತಲೂ ಹೆಚ್ಚಾಗಿ ಪಕ್ಷದ ಸಚಿವರಿಗೆ ಅವಕಾಶ ಕೊಡದೆ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಬಿಜೆಪಿ ಅತೃಪ್ತ ಶಾಸಕರ ಜೊತೆ ಮಾತನಾಡಲು ಕಾಂಗ್ರೆಸ್ ಮುಖಂಡರು ಸಾಥ್ ಕೊಟ್ಟಿರುವುದು ಕಾಂಗ್ರೆಸ್ ನಿಜಬಣ್ಣ ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ಬೆಂಗಳೂರಿಗೆ ಬರಲ್ಲ-ಶಿವರಾಜ್ ತಂಗಡಗಿ: ಅತೃಪ್ತ ಶಾಸಕರನ್ನು ಶುಕ್ರವಾರ ಸಂಜೆಯೊಳಗೆ ಬೆಂಗಳೂರಿಗೆ ಕರೆ ತರುವುದಾಗಿ ಜೆಡಿಎಸ್ ಶಾಸಕ ಜಮೀರ್ ಅಹಮದ್ ಹೇಳಿಕೆ ಕೊಟ್ಟಿದ್ದರು. ಅಲ್ಲದೆ, ಪಕ್ಷದ ಅತೃಪ್ತ ಶಾಸಕರು ಇಂದು ಸಂಜೆಯೊಳಗೆ ರಾಜಧಾನಿಗೆ ವಾಪಸ್ ಆಗುತ್ತಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ತಿಳಿಸಿದ್ದರು. ಆದರೆ ಅತೃಪ್ತ ಬಣದ ಶಾಸಕ ಶಿವರಾಜ್ ತಂಗಡಗಿ, ನಾವು ಇವತ್ತು ಬೆಂಗಳೂರಿಗೆ ಆಗಮಿಸುವುದಿಲ್ಲ. ಅಕ್ಟೋಬರ್ 11ರಂದು ನೇರವಾಗಿ ವಿಧಾನಸೌಧಕ್ಕೆ ಆಗಮಿಸುವುದಾಗಿ ಖಾಸಗಿ ಟಿವಿ ವಾಹಿನಿಯೊಂದಕ್ಕೆ ದೂರವಾಣಿ ಮೂಲಕ ಸ್ಪಷ್ಟಪಡಿಸಿದ್ದಾರೆ.
ಗೋವಾದ ರೆಸಾರ್ಟ್‌ನಲ್ಲಿ ರೇಣುಕಾಚಾರ್ಯ ಸೇರಿದಂತೆ 14 ಮಂದಿ ಅತೃಪ್ತ ಶಾಸಕರ ಜೊತೆ ಒಂದೆಡೆ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಮತ್ತೊಂದೆಡೆ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಮಾತುಕತೆ ನಡೆಸುತ್ತಿದ್ದಾರೆ. ಹಾಗಾಗಿ ಅತೃಪ್ತರು ಈವರೆಗೂ ಯಾವುದೇ ಸ್ಪಷ್ಟ ನಿರ್ಧಾರ ಘೋಷಿಸಲು ವಿಫಲರಾಗಿದ್ದಾರೆ. ಅಂತೂ 14 ಮಂದಿ ರೆಬೆಲ್‌ಸ್ಟಾರ್‌ಗಳು ಯಾರ ಮಾತು, ಆಮಿಷಕ್ಕೆ ಒಳಗಾಗುತ್ತಾರೆ ? ಯಡಿಯೂರಪ್ಪನವರಿಗೆ ತಮ್ಮ ನಿಷ್ಠೆ ತೋರಿಸಿ ಸರಕಾರ ಸುಭದ್ರ ಎಂಬುದನ್ನು ಸಾಬೀತುಪಡಿಸುತ್ತಾರೋ ಅಥವಾ ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿ ಸರಕಾರದ ಪತನಕ್ಕೆ ನಾಂದಿ ಹಾಡುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ!