ಬಹುಮತ ಸಾಬೀತುಪಡಿಸುವ ಬಗ್ಗೆ ನೂರು ವಿಶ್ವಾಸ ಹೊಂದಿದ್ದೇನೆ.. ಈ ಮೊದಲಿಗಿಂತಲೂ ಹೆಚ್ಚು ಶಕ್ತಿ ಪ್ರದರ್ಶಿಸುತ್ತೇನೆ.. ನವರಾತ್ರಿ ಮುಗಿಯುವುದರೊಳಗೆ ಸಚಿವ ಸಂಪುಟ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಅ.12ರ ತನಕ ಗಡುವು ನೀಡಿದ್ದಾರೆ. ಆದರೆ, ನಾನು ಅ.11ರಂದೇ ವಿಶೇಷ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸುತ್ತೇನೆ. ಬಿಟ್ಟುಹೋಗಲು ಪ್ರಯತ್ನಿಸಿದ ಅನೇಕ ಶಾಸಕರು ಮತ್ತೆ ನಮ್ಮ ಸಂಪರ್ಕದಲ್ಲಿದ್ದಾರೆ. ನಮ್ಮಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ. ಬಹುಮತ ಸಾಬೀತುಪಡಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದೇನೆ ಎಂದು ಅವರು ಹೇಳಿದರು.
ಕೇವಲ ಎರಡೂವರೆ ವರ್ಷದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲು ಸಾಧ್ಯವಾಗದವರು ಸರಕಾರ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಸ್ವಾರ್ಥಿಗಳ ಕೈವಾಡ ಇದೆ. ನಮ್ಮವರೇ ಬಹಳ ಮಂದಿ ಇದರ ಹಿಂದೆ ಇದ್ದಾರೆ. ಬಿಜೆಪಿಯ ಚಿಹ್ನೆಯಿಂದ ಗೆದ್ದವರು, ಅಭಿವೃದ್ಧಿ ಬಯಸುವವರು ಖಂಡಿತಾ ನಮ್ಮ ಜತೆ ಬರುತ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಜೆಡಿಎಸ್ ಈ ರಾಜ್ಯದ ಅಭಿವೃದ್ದಿಗೆ ಮಾರಕ. ಮೊದಲು ಕೈ ಜೋಡಿಸುವ ನಂತರ ದ್ರೋಹ ಮಾಡುವ ಕೆಲಸವನ್ನು ಕುಮಾರಸ್ವಾಮಿ ನಿರಂತರ ಮಾಡುತ್ತಾ ಬಂದಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅದರ ಅಧ್ಯಕ್ಷೆ ಸೋನಿಯಾ ಗಾಂಧಿ, ಅಪರೂಪದ ವ್ಯಕ್ತಿತ್ವದ ಪ್ರಧಾನಿ ಮನಮೋಹನ್ ಸಿಂಗ್ ಈ ಅಪ್ಪ ಮಕ್ಕಳ ಕುತಂತ್ರಕ್ಕೆ ಅವರು ಮರುಳಾಗುವುದಿಲ್ಲ ಎಂದು ನನ್ನ ಭಾವನೆ ಎಂದಿದ್ದಾರೆ.