ಕೊಲೆ ಹಲವಾರು ಕಾರಣಗಳಿಗಾಗಿ ನಡೆಯುತ್ತದೆ. ಅದೇ ರೀತಿ ಚಪಾತಿ ಮಾಡುವ ವಿಚಾರದಲ್ಲಿ ಉಂಟಾದ ರೂಮ್‌ಮೇಟ್‌ಗಳ ಕಲಹ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಕಂಡತ್ಪಳ್ಳಿ ಇಂಡೊ - ಆರ್ಯ ಸೆಂಟ್ರಲ್ ಟ್ರಾನ್ಸ್‌ಪೋರ್ಟ್‌ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಮಣ್ಣಗುಡ್ಡೆ ಸಿಕ್ವೇರಾ ಕಂಪೌಂಡ್ ನಿವಾಸಿ, ಗುಜರಾತ್ ಮೂಲದ ರೋಹಿತಾಶ್ವ (25) ಕೊಲೆಗೀಡಾದ ಯುವಕ. ಬುಧವಾರ ತಡರಾತ್ರಿ ರೂಂಮೇಟ್ ಸಂದೀಪ್ ಸೋನಿ ಮಲಗಿದ್ದ ರೋಹಿತಾಶ್ವನ ಹೊಟ್ಟೆಗೆ, ಎದೆಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.
ಕಂಡತ್ಪಳ್ಳಿ ಟ್ರಾನ್ಸ್‌ಪೋರ್ಟ್ ಸಂಸ್ಥೆಯಲ್ಲಿ ದುಡಿಯವ 6 ನೌಕರರು ಮಣ್ಣಗುಡ್ಡದ 2 ರೂಮ್‌ಗಳಲ್ಲಿ ವಾಸವಾಗಿದ್ದರು. ಎಲ್ಲರೂ ಹರ್ಯಾಣ, ಗುಜರಾತ್‌ನವರಾಗಿದ್ದು, ಸರದಿಯಂತೆ ಅಡುಗೆ ಮಾಡುತ್ತಾರೆ. 15 ದಿನಗಳ ಹಿಂದಷ್ಟೇ ಸಂದೀಪ್ ಸೋನಿ ರೂಮ್‌ಗೆ ಬಂದಿದ್ದ.
ಬುಧವಾರ ರಾತ್ರಿ 9.30ಕ್ಕೆ ಚಪಾತಿ ಮಾಡುವಂತೆ ಸಂದೀಪ್‌ಗೆ ರೋಹಿತಾಶ್ವ ಸೂಚಿಸಿದ್ದ. ಆದರೆ ಎರಡು ದಿನಗಳ ಹಿಂದಷ್ಟೆ ಅಡುಗೆ ಮಾಡಿದ್ದೆ ಎಂದು ಹೇಳಿ ಆತ ಚಪಾತಿ ಮಾಡಲು ನಿರಾಕರಿಸಿದ. ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದರು. ಉಳಿದವರು ಸೇರಿ ಅಡುಗೆ ಮಾಡಿದ್ದು, ಎಲ್ಲರೂ ಊಟ ಮಾಡಿ ಮಧ್ಯರಾತ್ರಿ 12 ಗಂಟೆಗೆ ಮಲಗಿದ್ದರು.
ಆಶೋಕ್, ಕುಲದೀಪ್, ಆಶೀಶ್ ಒಂದು ರೂಮ್‌ನಲ್ಲಿ ಮಲಗಿದರೆ, ಸುಭಾಸ್, ಸಂದೀಪ್ ಸೋನಿ, ರೋಹಿತಾಶ್ವ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ರಾತ್ರಿ 2 ಗಂಟೆ ರೋಹಿತಾಶ್ವ ಬೊಬ್ಬೆ ಹೊಡೆಯತೊಡಗಿದ್ದ. ಪಕ್ಕದಲ್ಲಿ ಮಲಗಿದ್ದ ಸುಭಾಶ್ ಲೈಟ್ ಹಾಕಿದಾಗ ರೋಹಿತಾಶ್ವ ಹೊಟ್ಟೆ ಹಿಡಿದುಕೊಂಡು ನರಳುತ್ತಿದ್ದ. ಎದೆಯಲ್ಲಿ ಚೂರಿ ನಾಟಿಕೊಂಡಿತ್ತು, ರಕ್ತ ಹರಿಯುತ್ತಿತ್ತು. ಸುಭಾಸ್‌ನನ್ನು ಕೆಕ್ಕರಿಸಿ ನೋಡಿದ ಸಂದೀಪ್ ಅಲ್ಲಿಂದ ಹೊರಗೆ ಓಡಿದ್ದ.
ಸುಭಾಸ್ ಹೊರಗೆ ಬಂದು ನೋಡಿದಾಗ ಮತ್ತೊಂದು ರೂಮ್‌ಗೆ ಹೊರಭಾಗದಲ್ಲಿ ಚಿಲಕ ಹಾಕಲಾಗಿತ್ತು. ಚೂರಿ ಇರಿತಕ್ಕೆ ಸಂದೀಪ್ ಬೊಬ್ಬೆ ಹೊಡೆದರೆ ಸಹಾಯಕ್ಕೆ ಗೆಳೆಯರು ತಕ್ಷಣ ಹೊರ ಬರಬಾರದು ಎಂಬ ಕಾರಣಕ್ಕೆ ಹಂತಕ ಚಿಲಕ ಹಾಕಿದ್ದ.
ಸುಭಾಸ್ ತನ್ನ ಮಾಲೀಕ ಜಯವೀರ್ ಸಿಂಗ್‌ಗೆ ಮಾಹಿತಿ ನೀಡಿದ್ದು, ಬೈಕ್‌ನಲ್ಲಿ ರೋಹಿತಾಶ್ವನನ್ನು ಉಳ್ಳಾಲ ನರ್ಸಿಂಗ್ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ನಂತರ ಆಂಬ್ಯುಲೆನ್ಸ್‌ನಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸಲಾಯಿತು. ದಾರಿ ಮಧ್ಯೆ ಯುವಕ ಮೃತಪಟ್ಟಿರುವುದಾಗಿ ವೈದ್ಯರು ಸೂಚಿಸಿದರು. ಸುಭಾಸ್ ಬರ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ.