ರೆಸಾರ್ಟ್ ರಾಜಕಾರಣದಲ್ಲಿ ನಂಬಿಕೆಯಿಲ್ಲ... ರಾಜಕೀಯ ದೊಂಬರಾಟವೂ ಇಷ್ಟವಿಲ್ಲ... ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗಲ್ಲ... ಇದು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಸ್ಪಷ್ಟ ನುಡಿ.
ಬಿಜೆಪಿ ನಾಯಕರು, ಮುಖ್ಯಮಂತ್ರಿ ಮತ್ತು ಶಾಸಕರ ನಡುವಿನ ಸಮನ್ವಯ ಕೊರತೆಯೇ ಇಂದಿನ ಸ್ಥಿತಿಗೆ ಕಾರಣ. ಇಂದಿನ ರಾಜಕೀಯ ಸ್ಥಿತಿ ಕಂಡು ದುಃಖವಾಗುತ್ತಿದೆ. ನಾನು ಪಕ್ಷ ನಿಷ್ಠೆ ಬದಲಿಸಿಲ್ಲ. ಯಾವ ನಾಯಕರು ಕರೆದರೂ ಮೂಡಿಗೆರೆ ಬಿಟ್ಟು ಹೋಗಲ್ಲ. ಕ್ಷೇತ್ರದ ಜನತೆ ಮತ್ತು ಪಕ್ಷದ ವಿರುದ್ಧ ನಡೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಹಿಂದಿನ 2-3 ರಾಜಕೀಯ ಘಟನೆಗಳಲ್ಲಿ ತಮ್ಮ ಮನೆ ಬಾಗಿಲಿಗೆ ಕೋಟ್ಯಂತರ ರೂ. ಹಣ ಬಂದರೂ ಕೈಚಾಚಿಲ್ಲ. ಇಂದಿನ ಸ್ಥಿತಿ ಕಂಡು ಮನಸ್ಸಿಗೆ ತುಂಬ ನೋವಾಗುತ್ತಿದೆ. ತಾವು ಯಾವುದೇ ಕಾರಣಕ್ಕೂ ರಾಜಕೀಯ ಸಿದ್ದಾಂತ ಬಲಿ ಕೊಡುವುದಿಲ್ಲ. ರಾಜ್ಯದ ಕೆಲ ನಾಯಕರು ನನ್ನ ನಿಷ್ಠೆ, ಪ್ರಾಮಾಣಿಕತೆಯನ್ನು ದೌರ್ಬಲ್ಯ ಎಂದು ಭಾವಿಸಿದ್ದರು. ಇದರ ಪರಿಣಾಮವೇ ಇಂದಿನ ಸ್ಥಿತಿ. ಹಿಂದೆಯೇ ಶಾಸಕರಿಗೆ ಗೌರವದ ಸ್ಥಾನ ಕೊಟ್ಟಿದ್ದರೆ ಇಂದಿನ ಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನ ನಾಗರಬಾವಿ ಭೂಮಿ ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಪತ್ರ ನೀಡಿದಾಗ 'ಆಗಲ್ಲ' ಎಂದು ಹೇಳಿದ್ದರು. ಈಗ ವಿವಾದವನ್ನು ನನ್ನ ಮೂತಿಗೆ ಒರೆಸಲು ಪ್ರಯತ್ನಿಸಲಾಗುತ್ತಿದೆ. ಈ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಇಂದಿನ ರಾಜಕೀಯ ಸ್ಥಿತಿಗತಿ ಬಗ್ಗೆ ದುಃಖವಾಗುತ್ತಿದೆ ಎಂದಿದ್ದಾರೆ.