ನವ್ಯ ಪರಂಪರೆಯ ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯದಲ್ಲಿ ವಿಭಿನ್ನ ಶಕ್ತಿ ಅಡಗಿದೆ ಎಂದು ಸಾಹಿತಿ ಯು.ಆರ್.ಅನಂತಮೂರ್ತಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಮ್ ಸಂಸ್ಕೃತಿ ಶಿಬಿರದ ಐದನೇ ದಿನ ಅವರು, ಅಡಿಗರ "ಕೂಪ ಮಂಡೂಕ' ಕಾವ್ಯವನ್ನು ವಾಚಿಸಿ, ವಿಶ್ಲೇಷಿಸಿದರು.
ಕೂಪ ಮಂಡೂಕ ಎಂದರೆ ಪ್ರಪಂಚ ಗೊತ್ತಿಲ್ಲದೆ ಕೆಸರಿನಲ್ಲಿರುವ ಕಪ್ಪೆ. ಅದಕ್ಕೆ ಮಣ್ಣು, ವಾಸನೆ ಜತೆಗಿರಬೇಕು. ಪದ್ಯ ಹಲವು ಹೊಸ ಬೆಳಕನ್ನು ಚೆಲ್ಲುತ್ತದೆ. ನಮಗಿರುವ ತೆವಲು, ಅತಿ ಅಹಂಕಾರ ತ್ಯಜಿಸಬೇಕೆಂಬುದನ್ನು ಇದು ಧ್ವನಿಸುತ್ತದೆ. ನನಗೆಲ್ಲ ತಿಳಿದಿದೆ ಎಂದಾಗ ಕ್ರಿಯಾಶೀಲತೆ ಹೋಗುತ್ತದೆ. ಏನೂ ಗೊತ್ತಿಲ್ಲ ಎಂದಾಗ ಕ್ರಿಯಾಶೀಲತೆ ಬರುತ್ತದೆ. ಎಲ್ಲವನ್ನೂ ಮಾಡುತ್ತೇನೆಂದು ಹೊರಟವನು ಏನೂ ಮಾಡುವುದಿಲ್ಲ ಎಂದು ವ್ಯಂಗ್ಯವಾಗಿ ಕವಿ ಹೇಳುತ್ತಾನೆ ಎಂದವರು ವಿಶ್ಲೇಷಿಸಿದರು.
ಲೇಖಕ ಮನು ಚಕ್ರವರ್ತಿ ಪ್ರತಿಕ್ರಿಯಿಸಿ, ಅಡಿಗರ ಪದ್ಯದ ಆವರಣ ಸ್ಥಳೀಯವಾಗಿದೆ. ಅರ್ಥ ಜಾಗತಿಕವಾಗಿದೆ. ಪದ್ಯಗಳನ್ನು ಬೇರೆ ಬೇರೆ ರೀತಿಯಲ್ಲಿ ನೋಡುವ ಮಾರ್ಗವನ್ನು ಗುರುತಿಸಿಕೊಳ್ಳಬೇಕು. ಪ್ರಾಯೋಗಿಕ ವಿಮರ್ಶೆ ಸಾಂಸ್ಕೃತಿಕ ಜಿಜ್ಞಾಸೆಯೂ ಹೌದು ಎಂದರು. ಸಂಜೆ ಶಿವರಾಮ ಕಾರಂತ ರಂಗಮಂದಿರದಲ್ಲಿ ಪಂಡಿತ್ ನಾಗಭೂಷಣ ಹೆಗಡೆ ಮತ್ತು ಸಹ ಕಲಾವಿದರು ಹಿಂದೂಸ್ತಾನಿ ಗಾಯನ ಹಾಡಿ ರಂಜಿಸಿದರು.