ಅತೃಪ್ತರ ತ್ರಿಶಂಕು ಸ್ಥಿತಿ: 14 ಮಂದಿ ರಾಜೀನಾಮೆ ಸಾಧ್ಯತೆ?
ಬೆಂಗಳೂರು, ಶನಿವಾರ, 9 ಅಕ್ಟೋಬರ್ 2010( 10:31 IST )
NRB
ಅಕ್ಟೋಬರ್ 11ರಂದು ವಿಶ್ವಾಸಮತ ವ್ಯಕ್ತಪಡಿಸುವುದು ಖಚಿತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಲವಾದ ಆತ್ಮವಿಶ್ವಾಸ ವ್ಯಕ್ತಪಡಿಸಿರುವ ಬೆನ್ನಲ್ಲೇ, ಗೋವಾದಲ್ಲಿ ಅತೃಪ್ತ ಶಾಸಕರ ಜೊತೆ ಸಚಿವ ಜನಾರ್ದನ ರೆಡ್ಡಿ, ಉಮೇಶ್ ಕತ್ತಿ ನಡೆಸುತ್ತಿರುವ ಸಂಧಾನ ಕೂಡ ಮುರಿದು ಬಿದ್ದಿದೆ ಎನ್ನಲಾಗಿದೆ. ಏತನ್ಮಧ್ಯೆ ಭಿನ್ನಮತೀಯ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯ ಊಹಾಪೋಹ ಕೇಳಿಬರುತ್ತಿದೆ.
ಗೋವಾದ ತಾಜ್ ಎಕ್ಸೋಟಿಕಾ ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿರುವ ಅತೃಪ್ತ ಶಾಸಕರ ಜೊತೆ ಜನಾರ್ದನ ರೆಡ್ಡಿ, ಉಮೇಶ್ ಕತ್ತಿ, ರಮೇಶ್ ಕತ್ತಿ ಹಾಗೂ ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕಾರ್ ತಮ್ಮ ಮಾತುಕತೆಯನ್ನು ಮುಂದುವರಿಸಿದ್ದಾರೆ. ಮತ್ತೊಂದೆಡೆ ಜೆಡಿಎಸ್‌ನ ಜಮೀರ್ ಅಹ್ಮದ್ ಕೂಡ ರೆಸಾರ್ಟ್‌ನಲ್ಲಿ ಭಿನ್ನರ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಆದರೆ ಭಿನ್ನಮತೀಯ ಶಾಸಕರು ರೆಡ್ಡಿ ಸಂಧಾನಕ್ಕೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ ಎನ್ನಲಾಗಿದೆ.
ಮುಖ್ಯಮಂತ್ರಿ ವಿರುದ್ಧ ಈ ಹಿಂದೆ ಬಂಡಾಯದ ಬಾವುಟ ಹಾರಿಸಿದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಅವರಿಂದ ಆದ ಕಹಿ ಅನುಭವವೇ ಇದಕ್ಕೆ ಕಾರಣ ಎನ್ನಲಾಗಿದೆ. ಮುಖ್ಯಮಂತ್ರಿ ವಿರುದ್ಧ ಬಂಡೆದ್ದು ಈ ಹಿಂದೆ 40 ಶಾಸಕರನ್ನು ಹೈದರಾಬಾದ್‌ಗೆ ಕರೆದುಕೊಂಡು ಬಂದಿದ್ದ ರೆಡ್ಡಿ, ಅತೃಪ್ತರನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಂಡರೇ ಹೊರತು ಮತ್ತೇನನ್ನೂ ಮಾಡಲಿಲ್ಲ. ಹೀಗಾಗಿ ಬಳ್ಳಾರಿ ಸೋದರರನ್ನು ಮತ್ತೊಮ್ಮೆ ನಂಬುದು ಬೇಡ ಎಂಬ ಅಭಿಪ್ರಾಯ ಭಿನ್ನಮತೀಯ ಶಾಸಕರದ್ದಾಗಿದೆ.
ಎಡಬಿಡಂಗಿ ರೇಣುಕಾಚಾರ್ಯ:ಅತೃಪ್ತ ಶಾಸಕರ ನಾಯಕ ಸಚಿವ ಎಂ.ಪಿ.ರೇಣುಕಾಚಾರ್ಯ ಒಂದೆಡೆ ರೆಡ್ಡಿ ಸಂಧಾನಕ್ಕೆ ತಲೆಯಾಡಿಸಿದರೆ, ಮತ್ತೊಂದೆಡೆ ಜಮೀರ್ ಅಹ್ಮದ್ ಅವರ ಆಮಿಷಕ್ಕೂ ಜೈ ಹೋ ಎನ್ನುವ ಮೂಲಕ ಉಳಿದ ಅತೃಪ್ತ ಶಾಸಕರಿಗೆ ದೃಢ ನಿರ್ಧಾರ ಕೈಗೊಳ್ಳಲು ತ್ರಿಶಂಕು ಸ್ಥಿತಿಯಾಗಿದೆ ಎಂದು ಮೂಲವೊಂದು ತಿಳಿಸಿದೆ. ಅತೃಪ್ತ ಶಾಸಕರೆಲ್ಲರೂ ರೇಣುಕಾಚಾರ್ಯ ಅವರ ನಿರ್ಧಾರವನ್ನೇ ಬೆಂಬಲಿಸುವ ನಿಟ್ಟಿನಲ್ಲಿದ್ದಾರೆ. ಆದರೆ ರೇಣುಕಾಚಾರ್ಯ ಎರಡು ದೋಣಿಯ ಮೇಲೆ ಕಾಲಿಡುತ್ತಿರುವುದು ಅತೃಪ್ತ ಶಾಸಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.
ಕುತೂಹಲ ಮೂಡಿಸಿದ ಭಿನ್ನರ ಅಂತಿಮ ನಿರ್ಧಾರ:ಒಟ್ಟಾರೆ ಜಮೀರ್ ಅಹ್ಮದ್ ಹಾಗೂ ಜನಾರ್ದನ ರೆಡ್ಡಿ ಸಂಧಾನದ ಮಾತುಕತೆಯ ಫಲಪ್ರದದಂತೆ ಭಿನ್ನಮತೀಯ ಶಾಸಕರು ಯಾರಿಗೆ ಜೈ ಹೋ ಎನ್ನುತ್ತಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ. ಆ ನಿಟ್ಟಿನಲ್ಲಿ ಶನಿವಾರ ಸಂಜೆ ಬೆಂಗಳೂರಿಗೆ ಆಗಮಿಸಿ ತಮ್ಮ ನಿರ್ಧಾರವನ್ನು ಘೋಷಿಸುವುದಾಗಿ ಭಿನ್ನಮತೀಯ ಶಾಸಕರು ಈಗಾಗಲೇ ಘೋಷಿಸಿದ್ದಾರೆ. ಆ ನಿಟ್ಟಿನಲ್ಲಿ ಭಿನ್ನರು ತಳೆಯುವ ನಿರ್ಧಾರ ರಾಜ್ಯರಾಜಕಾರಣದಲ್ಲಿ ಯಾರ ಮುಖದಲ್ಲಿ ನಗು ಅರಳಲಿದೆ ಎಂಬುದನ್ನು ಕಾದ ನೋಡಬೇಕಾಗಿದೆ.