ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ಡಾ.ವೀರೇಂದ್ರ ಹೆಗಡೆ ಅವರು ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಶುಕ್ರವಾರ ಬೆಳಿಗ್ಗೆ 8-31ರಿಂದ 9-01ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಸ್ತುವಾರಿ ಸಚಿವ ರಾಮದಾಸ್, ಮೇಯರ್ ಸಂದೇಶ್ ಸ್ವಾಮಿ ಹಾಜರಿದ್ದರು.
ನಾಡಗೀತೆ ನಂತರ ಮಾತನಾಡಿದ ಹೆಗಡೆಯವರು, ನವರಾತ್ರಿಯಲ್ಲಿ ದೇವಿ ಆರಾಧನೆ ಮಾಡುವ ಮುಖೇನ ನಾಡಿನ ಜನತೆಗೆ ಸುಖ, ಶಾಂತಿ ನೆಮ್ಮದಿ ತರುವಂತೆ ಕೋರಲಾಗುವುದು ಅಲ್ಲದೆ, 9ದಿನಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಇದೊಂದು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ದಸರಾ ಸಂದರ್ಭದಲ್ಲಿ ಆಯುಧ ಪೂಜೆ ಮಾಡುವುದು ಸಂಪ್ರದಾಯ, ಇದೊಂದು ಶಕ್ತಿಯ ಆರಾಧನೆ, ಪರಂಪರೆ ಮತ್ತು ಸಂಸ್ಕೃತಿಯನ್ನು ನೆನಪಿಸಿಕೊಂಡು ಜನತೆ ಸಾಮಾಜಿಕ ಬದ್ದತೆ, ಸೌಹಾರ್ದತೆ ಸಹಬಾಳ್ವೆ ಮಾಡುವ ಮೂಲಕ ದೇಶದ ಐಕ್ಯತೆಗೆ ಮುಂದಾಗಬೇಕು. ಮೇಲು-ಕೀಳು ಎಂಬ ಭಾವನೆಯನ್ನು ತ್ಯಜಿಸಿ ನಮ್ಮ ಸಂಸ್ಕೃತಿಯನ್ನು ಪರಂಪರೆಯನ್ನು ಬೆಳೆಸಿ ಪೋಷಿಸಬೇಕೆಂದು ಕರೆ ನೀಡಿದರು.