ರಾಜಕಾರಣಿಗಳಿಗೂ ಮೂಢನಂಬಿಕೆಗೂ ಅವಿನಾಭಾವ ಸಂಬಂಧ. ಅಧಿಕಾರ ಹಿಡಿಯಲು, ಅಧಿಕಾರದಿಂದ ಕೆಳಗಿಳಿಸಲು, ವಿಘ್ನು ನಿವಾರಕಕ್ಕೆ...ಹೀಗೆ ದೇವರಿಗೆ ಮೊರೆ ಹೋಗುವಂತೆಯೇ ವಾಮಚಾರದತ್ತ ಮುಖಮಾಡುವುದು ರಾಜಕಾರಣಿಗಳಿಗೆ ಅಂಟಿದ ಚಾಳಿ. ಅದಕ್ಕೆ ಪೂರಕ ಎಂಬಂತೆ ವಿಧಾನಸೌಧದಲ್ಲಿಯೂ ಮಾಟ-ಮಂತ್ರ ಮಾಡಿರುವ ಅಂಶ ಮತ್ತೊಂದು ಕುತೂಲಕ್ಕೆ ಕಾರಣವಾಗಿದೆ.
ವಿಧಾನಸೌಧದ ಆವರದ ಮರದ ಕೆಳಗೆ ಮಾಟ-ಮಂತ್ರ ಮಾಡಿರುವ ಕುರುಹು ಪತ್ತೆಯಾಗಿದೆ. ವಿಧಾನಸೌಧದ ಪಶ್ಚಿಮ ದ್ವಾರದ ಮುಖ್ಯ ಗೇಟ್ ಸಮೀಪ ತಾಮ್ರದ ಚೊಂಬು, ಮನುಷ್ಯನನ್ನು ಹೋಲುವ ಗೊಂಬೆ, ಕೋಳಿ ಮೊಟ್ಟೆ, ಕುಂಕುಮ ಹಾಕಿದ ನಿಂಬೆ ಹೋಳು, ತಾಮ್ರದ ತಗಡು ಹಾಗೂ ಬಲಿಕೊಟ್ಟ ಹುಂಜದ ತಲೆಯೂ ಪತ್ತೆಯಾಗಿದೆ. ಈ ವಾಮಚಾರವನ್ನು ಯಾರ ರಕ್ಷಣೆಗೆ ಮಾಡಲಾಗಿದೆ, ಯಾರ ವಿರುದ್ಧ ಮಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ, ಕೇವಲ ವದಂತಿಗಳೇ ಹೆಚ್ಚಾಗಿದೆ.
ಒಟ್ಟಿನಲ್ಲಿ ರಾಜ್ಯರಾಜಕೀಯದಲ್ಲಿ ರಾಜಕೀಯ ಬಿಕ್ಕಟ್ಟು ಸಂಭವಿಸಿದ ನಡುವೆ ವಿಧಾನಸೌಧದ ಆವರಣದಲ್ಲಿ ವಾಮಚಾರ ನಡೆಸಿರುವವರು ಯಾರು ಎಂಬುದು ಬಹುಚರ್ಚಿತವಾಗುತ್ತಿದೆ. ಅಪಾಯದ ಸುಳಿಗೆ ಸಿಲುಕಿರುವ ಸರಕಾರವನ್ನು ಉಳಿಸಿಕೊಳ್ಳಲು ವಾಮಚಾರದ ಮೊರೆ ಹೋಗಲಾಗಿದೆ ಎಂಬ ಊಹಾಪೋಹವೂ ಕೇಳಿ ಬರುತ್ತಿದೆ. ಈ ಹಿಂದೆಯೂ ಮಾಟ-ಮಂತ್ರ, ವಾಮಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧವೂ ಸಾಕಷ್ಟು ಆರೋಪ ಕೇಳಿಬಂದಿತ್ತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜ್ಯೋತಿಷ್ಯವನ್ನು ಬಲವಾಗಿ ನಂಬುತ್ತಾರೆಂಬುದು ನಗ್ನಸತ್ಯ. ಆ ಕಾರಣಕ್ಕಾಗಿಯೇ ಯಡಿಯೂರಪ್ಪ ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ವಿಧಾನಸೌಧದ ಎರಡೂ ಗೇಟ್‌ಗಳನ್ನು ಗುರುವಾರದಿಂದಲೇ ಬಂದ್ ಮಾಡಿಸಿದ್ದಾರೆ. ಅವರ ಜಾತಕದಲ್ಲಿ ಸೂರ್ಯ ಬಲಹೀನನಾಗಿರುವುದರಿಂದ ಈ ಭಾಗದಿಂದ ಆಪತ್ತು ಎದುರಾಗಬಹುದು ಎಂದು ಜ್ಯೋತಿಷಿಯೊಬ್ಬರು ಎಚ್ಚರಿಕೆ ನೀಡಿದ್ದರ ಪರಿಣಾಮ ವಾಮಚಾರ ನಡೆಸಿರುವು ಸಾಧ್ಯತೆ ಇದೆ ಎಂಬ ಮಾತು ವಿಧಾನಸೌಧದ ಪಡಸಾಲೆಯಿಂದ ಕೇಳಿಬರುತ್ತಿದೆ.
ಆದರೆ ವಿಧಾನಸೌಧದ ಆವರಣದಲ್ಲಿ ವಾಮಾಚಾರ ಮಾಡಿರುವ ಕುರುಹು ಸಿಕ್ಕಿದ ನಂತರ, ಇದನ್ನು ಯಾರೋ ಕಿಡಿಗೇಡಿಗಳು ಮಾಡಿದ್ದಾರೆಂಬುದಾಗಿ ಪೊಲೀಸರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. ಅಂತೂ ಅಧಿಕಾರದ ಉಳಿವಿಗಾಗಿ ಮತ್ತು ಸರಕಾರ ಉರುಳಿಸಲು ರೆಸಾರ್ಟ್ ರಾಜಕೀಯ ನಡುತ್ತಿರುವ ಮಧ್ಯೆಯೇ ರಾಜಕಾರಣಿಗಳು ಮಾಟ-ಮಂತ್ರದ ಮೊರೆ ಹೋಗಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ.