ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತ್ತೊಂದು ತಿರುವು; ಅಶ್ವತ್ಥ ಬಿಜೆಪಿಗೆ-ಬೆಳ್ಳುಬ್ಬಿ ಮತ್ತೆ ಗೋವಾಕ್ಕೆ! (BJP | Goa | Bellubbi | JDS | Kumaraswamy | Ashwath | Congress)
ಮತ್ತೊಂದು ತಿರುವು; ಅಶ್ವತ್ಥ ಬಿಜೆಪಿಗೆ-ಬೆಳ್ಳುಬ್ಬಿ ಮತ್ತೆ ಗೋವಾಕ್ಕೆ!
ಬೆಂಗಳೂರು/ಗೋವಾ, ಶನಿವಾರ, 9 ಅಕ್ಟೋಬರ್ 2010( 13:23 IST )
NRB
ಅತೃಪ್ತ ಶಾಸಕರ ಗುಂಪಿನೊಂದಿಗೆ ಗುರುತಿಸಿಕೊಂಡು ನಂತರ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ಸಂಧಾನದ ಫಲ ಎಂಬಂತೆ ವಾಪಸ್ ಆಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬೆಂಬಲ ಘೋಷಿಸಿದ್ದ ಶಾಸಕ ಎಸ್.ಕೆ.ಬೆಳ್ಳುಬ್ಬಿ ಮತ್ತೆ ಉಲ್ಟಾ ಹೊಡೆದಿದ್ದು, ಮಹತ್ವದ ಬೆಳವಣಿಗೆಯಲ್ಲಿ ಶನಿವಾರ ಶಾಸಕ ಶಿವನಗೌಡ ನಾಯಕ್ ಜೊತೆ ಮರಳಿ ಗೋವಾ ರೆಸಾರ್ಟ್‌ನಲ್ಲಿ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಭಿನ್ನಮತೀಯ ಶಾಸಕರ ಮನವೊಲಿಸಲು ಜನಾರ್ದನ ರೆಡ್ಡಿ ಗೋವಾದ ಎಕ್ಸೋಟಿಕಾ ರೆಸಾರ್ಟ್‌ನಲ್ಲಿ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದರೆ. ರಾಜಕೀಯ ವಲಯದಲ್ಲಿ 'ಕಪ್ಪೆ ತುಲಭಾರ' ಎಂಬಂತೆ ಒಮ್ಮೆ ಆ ಗುಂಪು, ಮತ್ತೊಮ್ಮೆ ಈ ಗುಂಪು ಎಂಬಂತೆ ಬಣ್ಣ ಬದಲಿಸುತ್ತಿರುವುದು ಬಿಕ್ಕಟ್ಟು ಮುಂದುವರಿದಿದೆ.
ಇದೀಗ ಗೋವಾ ರೆಸಾರ್ಟ್ ರಾಜಕೀಯಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಇಂದು ಬೆಳಿಗ್ಗೆ ದೇವದುರ್ಗದ ಶಾಸಕ ಶಿವನಗೌಡ ನಾಯಕ್ ಜೊತೆ ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಎಸ್.ಕೆ.ಬೆಳ್ಳುಬ್ಬಿ ಗೋವಾ ರೆಸಾರ್ಟ್‌ಗೆ ಆಗಮಿಸಿ ಅತೃಪ್ತರ ಜತೆ ಗುರುತಿಕೊಂಡಿದ್ದಾರೆ. ಎರಡು ದಿನದ ಹಿಂದಷ್ಟೇ ಎಸ್.ಕೆ.ಬೆಳ್ಳುಬ್ಬಿ ಅವರು ಭಿನ್ನಮತೀಯ ಗುಂಪಿನಿಂದ ಹೊರ ಬಂದು, ತನ್ನ ನಿಷ್ಠೆ ಯಡಿಯೂರಪ್ಪನವರಿಗೆ ಇದೆ ಎಂದು ಸಚಿವ ಜನಾರ್ದನ ರೆಡ್ಡಿಯವರ ಜತೆಗೆ ಆಗಮಿಸಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಂತೂ ಮತ್ತೆ ಉಲ್ಟಾ ಹೊಡೆದ ಬೆಳ್ಳುಬ್ಬಿ ಮರಳಿ ಬಂಡಾಯದ ಗುಂಪಿನಲ್ಲಿ ಕಾಣಿಸಿಕೊಂಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸದ್ಯದ ಸ್ಥಿತಿ ಕಗ್ಗಂಟಾಗಿ ಪರಿಣಮಿಸಿದೆ.
ಶಂಕಲಿಂಗೇಗೌಡರು ಗೋವಾಕ್ಕೆ?: ಏತನ್ಮಧ್ಯೆ ಮೈಸೂರು ಚಾಮರಾಜ ಕ್ಷೇತ್ರದ ಶಾಸಕ ಶಂಕರಲಿಂಗೇಗೌಡರು ಜೆಡಿಎಸ್ ಸಂಸದ ಚಲುವರಾಯಸ್ವಾಮಿ ಜೊತೆ ಕೆಆರ್‌ಎಸ್‌ನಿಂದ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದಾರೆ. ಆದರೆ ಅವರು ಎಲ್ಲಿಗೆ ಹೋಗಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ.
ಹೊನ್ನಾಳಿ ಬಿಜೆಪಿ ಕಾರ್ಯಕರ್ತರು ಗೋವಾಕ್ಕೆ:ಬಂಡಾಯದ ಕಹಳೆ ಮೊಳಗಿಸಿ ಗೋವಾ ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿರುವ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ವಾಪಸ್ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಶನಿವಾರ ಗೋವಾಕ್ಕೆ ತೆರಳಿದ್ದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ತಾಲೂಕು ಪಂಚಾಯತ್ ಅಧ್ಯಕ್ಷರು ಸೇರಿದಂತೆ ಸುಮಾರು 15 ಮಂದಿ ಬಿಜೆಪಿ ಕಾರ್ಯಕರ್ತರು ತಾಜ್ ಎಕ್ಸೋಟಿಕಾ ಹೋಟೆಲ್‌ಗೆ ಆಗಮಿಸಿದ್ದರು. ಆದರೆ ಹೋಟೆಲ್‌ನ ಭದ್ರತಾ ಸಿಬ್ಬಂದಿಗಳು ಅವರನ್ನು ಒಳಬಿಡಲು ನಿರಾಕರಿಸಿದ ಪರಿಣಾಮ ಅವರೆಲ್ಲ ಹೋಟೆಲ್ ಹೊರಭಾಗದಲ್ಲಿಯೇ ಕಾಯುವಂತಾಗಿದೆ. ಪ್ರಮುಖ ರಾಜಕೀಯ ಮುಖಂಡರಿಗೆ ಮಾತ್ರ ಹೋಟೆಲ್ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ. ಅಂತೂ ಹೊನ್ನಾಳಿ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಆಗಬೇಕಾಗಿದೆ.
ಬಿಜೆಪಿ ಶಾಸಕ ಮಾನಪ್ಪ ಜೆಡಿಎಸ್ ತೆಕ್ಕೆಗೆ? ಬಿಜೆಪಿಯ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಕೂಡ ಕಳೆದ ಎರಡು-ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಅವರು ಜೆಡಿಎಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಜೆಡಿಎಸ್ ಶಾಸಕ ಅಶ್ವತ್ಥ ಬಿಜೆಪಿ ತೆಕ್ಕೆಗೆ:ಬಿಜೆಪಿ ಅತೃಪ್ತ ಶಾಸಕರನ್ನು ಸೆಳೆಯಲು ಜೆಡಿಎಸ್ ತಂತ್ರ ರೂಪಿಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಕೂಡ ಪ್ರತಿತಂತ್ರ ರೂಪಿಸಿದ್ದು, ಅದಕ್ಕೆ ಚನ್ನಪಟ್ಟಣ ಜೆಡಿಎಸ್ ಶಾಸಕ ಅಶ್ವತ್ಥ ತಮ್ಮ ನಿಷ್ಠೆ ಬದಲಿಸಿ ಬಿಜೆಪಿ ತೆಕ್ಕೆಗೆ ಬಂದಿದ್ದಾರೆ. ಕಳೆದ ಎರಡು ದಿನಗಳಿಂದ ಕ್ಷೇತ್ರದಿಂದ ನಾಪತ್ತೆ ಆಗಿದ್ದ ಅಶ್ವತ್ಥ ಬಗ್ಗೆ ಸಾಕಷ್ಟು ಊಹಾಪೋಹ ಕೇಳಿಬಂದಿತ್ತು. ಜೆಡಿಎಸ್ ಪಕ್ಷದಲ್ಲಿ 27 ವಜ್ರಗಳಿರುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ, ಬಿಜೆಪಿ ರಣತಂತ್ರಕ್ಕೆ ಜೆಡಿಎಸ್‌ನ ಒಂದು ರತ್ನ ಅಶ್ವತ್ಥ ಸೇರ್ಪಡೆಗೊಂಡಂತಾಗಿತ್ತು.
ಅಶ್ವತ್ಥ ಒಬ್ಬ ನೀಚ ರಾಜಕಾರಣಿ, ಶಾಸಕರಾಗಿದ್ದು ಅಶ್ವತ್ಥ ಚನ್ನಪಟ್ಟಣ ಕ್ಷೇತ್ರದ ಜನತೆಗೆ ವಿಶ್ವಾಸ ದ್ರೋಹ ಎಸಗಿದ್ದಾರೆ ಎಂದು ಸಂಸದ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ಅಶ್ವತ್ಥಗೆ ಕ್ಷೇತ್ರದ ಜನರು ಯಾವ ರೀತಿಯ ಸೇಡು ತೀರಿಸಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.