ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೇಣುಕಾಚಾರ್ಯ ಈಗ ಏಕಾಂಗಿ, ಸಿಎಂಗೆ ಬೆಂಬಲ! (Renukacharya | BJP Dissidence | Karnataka Govt | Goa Resort | Karnataka Politics)
ಗೋವಾದಲ್ಲಿ ಕರ್ನಾಟಕ ರಾಜ್ಯರಾಜಕಾರಣ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದ್ದು, ನಾಟಕೀಯ ಬೆಳವಣಿಗೆಯೊಂದರಲ್ಲಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ಹೊರತುಪಡಿಸಿ ಉಳಿದ 13 ಶಾಸಕರು ಜೆಡಿಎಸ್ ಶಾಸಕ ಜಮೀರ್ ಅಹಮ್ಮದ್ ಜೊತೆ ಬೇರೆಡೆ ತೆರಳುವ ಮೂಲಕ ಸಚಿವ ಜನಾರ್ದನ ರೆಡ್ಡಿ ಸಂಧಾನ ಮುರಿದು ಬಿದ್ದಂತಾಗಿದೆ. ಅಲ್ಲದೇ ತನ್ನ ನಿಷ್ಠೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಂತ ರೇಣುಕಾಚಾರ್ಯ ಉಲ್ಟಾ ಹೊಡೆದಿದ್ದಾರೆ!
ಆದರೆ ಏತನ್ಮಧ್ಯೆ, ಒಬ್ಬಂಟಿಯಾಗಿರುವ ರೇಣುಕಾಚಾರ್ಯ ಮೊದಲ ಬಾರಿಗೆ ತಾಜ್ ಎಕ್ಸೋಟೆಕಾದಿಂದ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡುತ್ತ, ಹತ್ತು ಹದಿನೈದು ಕಾರುಗಳಲ್ಲಿ ಬಂದ ಗೂಂಡಾಗಳು ಅತೃಪ್ತ ಶಾಸಕರನ್ನು ಕರೆದೊಯ್ದಿರುವುದಾಗಿ ಹೇಳುವ ಮೂಲಕ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ.
ಸುಮಾರು 150 ಜನ ಗೂಂಡಾಗಳು ಏಕಾಏಕಿ ರೆಸಾರ್ಟ್‌ನೊಳಗೆ ಆಗಮಿಸಿ ಎಲ್ಲಾ ಅತೃಪ್ತ ಶಾಸಕರನ್ನು ಎತ್ತಾಕಿಕೊಂಡು ಹೋಗಲು ಮುಂದಾದಾಗ ನಾನು ಹೇಗೋ ತಪ್ಪಿಸಿಕೊಂಡು ಹೊರಬಂದಿರುವುದಾಗಿ ರೇಣುಕಾಚಾರ್ಯ ತಿಳಿಸಿದ್ದಾರೆ. ಇಲ್ಲಿ ಕೆಲವು ಅತೃಪ್ತ ಶಾಸಕರು ಜೆಡಿಎಸ್ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ ಕೆಲವು ಶಾಸಕರು 20ರಿಂದ 25 ಕೋಟಿ ರೂಪಾಯಿಗೆ ತಮ್ಮನ್ನು ಮಾರಿಕೊಂಡಿರುವುದಾಗಿ ಆರೋಪಿಸಿದ್ದಾರೆ.
ನನಗೆ ಗೊತ್ತಿಲ್ಲದೆಯೇ ನಮ್ಮನ್ನು ಚೆನ್ನೈ, ಪೂನಾ, ಮುಂಬೈ ಅಂತ ಸುತ್ತಾಡಿಸಿ ಗೋವಾದಲ್ಲಿ ತಂದು ಕೂಡಿ ಹಾಕಿದ್ದರು. ಆದರೆ ಯಾರು ಕೂಡಿ ಹಾಕಿದ್ದರು ಎಂಬ ಪ್ರಶ್ನೆಗೆ ಹಾರಿಕೆಯ ಉತ್ತರ ಕೊಟ್ಟ ರೇಣುಕಾಚಾರ್ಯ, ನನ್ನ ಮೊಬೈಲ್ ಫೋನ್ ಅನ್ನು ಕೂಡ ಕಿತ್ತಿಟ್ಟುಕೊಂಡಿದ್ದರು. ಆದರೂ ಸಚಿವ ಜನಾರ್ದನ ರೆಡ್ಡಿ ಅವರು ಮಾತುಕತೆ ನಡೆಸಿದ ನಂತರ ನನ್ನ ಜೊತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ಗಡ್ಕರಿ ಅವರು ಚರ್ಚೆ ನಡೆಸಿ ನಮ್ಮ ಎಲ್ಲಾ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಅಷ್ಟೇ ಅಲ್ಲ ಎಲ್ಲಾ ಅತೃಪ್ತ ಶಾಸಕರು ನಮ್ಮ ಜೊತೆಯೇ ಇರುವುದಾಗಿ ಹೇಳಿದ್ದರು.
ಆದರೆ ಕಾಂಗ್ರೆಸ್, ಜೆಡಿಎಸ್ ಒಳಒಪ್ಪಂದದಿಂದಾಗಿ ಅತೃಪ್ತ ಶಾಸಕರಲ್ಲೇ ಒಡಕು ಮೂಡುವಂತಾಗಿದ್ದು, ನನ್ನನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿಯೂ ಆಮಿಷ ಒಡ್ಡಿದ್ದರು. ನಾನು ಅದ್ಯಾವುದಕ್ಕೂ ಒಪ್ಪದೆ, ನಾವು ಯಾವುದೇ ಕಾರಣಕ್ಕೂ ಬಿಜೆಪಿ ಸರಕಾರ ಉರುಳಿಸಲು ಮುಂದಾಗುವುದಿಲ್ಲ ಎಂಬ ಮಾತನ್ನು ಹೇಳಿದ್ದೆ. ಮಹತ್ವದ ಬದಲಾವಣೆ ಎಂಬಂತೆ ಕೆಲವು ಶಾಸಕರಿಗೆ ಇಷ್ಟ ಇಲ್ಲದಿದ್ದರೂ ಬಲವಂತದಿಂದ ಅವರಿಗೆ ಹಣ, ಅಧಿಕಾರದ ಆಮಿಷ ತೋರಿಸಿ ಅವರನ್ನು ಕರೆದೊಯ್ಯಲಾಗಿದೆ ಎಂದು ರೇಣುಕಾಚಾರ್ಯ ದೂರಿದ್ದಾರೆ.
ಉಲ್ಟಾ ಹೊಡೆದ ರೇಣುಕಾಚಾರ್ಯ:ನಾನು ಯಾವ ಕಾರಣಕ್ಕೂ ಮೋಸ ಮಾಡಲ್ಲ, ನನ್ನ ನಿಷ್ಠಿ ಏನಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪನಿಗೆ ಅಂತ ಘೋಷಿಸಿದ್ದಾರೆ. ನಾನು ಭಗವಂತನ ಮೇಲೆ ಆಣೆ ಮಾಡಿ ಹೇಳುತ್ತೇನೆ, ಜೆಡಿಎಸ್ ಜೊತೆ ಒಳಒಪ್ಪಂದ ಮಾಡಿಕೊಂಡು ಸರಕಾರ ಪತನ ಮಾಡಲು ಸಂಚು ರೂಪಿಸಿರುವುದಾಗಿ ರೇಣುಕಾಚಾರ್ಯ ಆರೋಪಿಸಿದ್ದಾರೆ.
ಚೆನ್ನೈನಲ್ಲಿ ರೇಣುಕಾಚಾರ್ಯ ಹೇಳಿದ್ದೇನು?: ನಾವು ಭಾರತೀಯ ಜನತಾ ಪಾರ್ಟಿ ಚಿಹ್ನೆಯಡಿಯಲ್ಲಿ ಎರಡು ಬಾರಿ ಆಯ್ಕೆಯಾಗಿದ್ದೇನೆ, ನಾವೆಲ್ಲ ಒಟ್ಟಾಗಿ ಒಂದಾಗಿ ಬೆಂಬಲ ನೀಡಿದ್ದೇವೆ. ಆದರೆ ಕೆಲವರು ಮುಖ್ಯಮಂತ್ರಿಗಳಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ನಾವು ಅನಿವಾರ್ಯವಾಗಿ ಬಿಜೆಪಿ ಸರಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆಯುವ ನಿರ್ಧಾರ ಬಂದಿದ್ದೇವೆ. ಬೇಳೂರುಗೆ ಸಚಿವ ಸ್ಥಾನ ನೀಡಬೇಕೆಂದು ಹೇಳಿದ್ದೇವು, ಗೂಳಿಹಟ್ಟಿಯನ್ನು ಕೈಬಿಟ್ಟಿದ್ದು ತಪ್ಪು. ನಾವು ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ನಾವೆಲ್ಲ ಸಮಾನಮನಸ್ಕರು ಇದೀಗ ಒಂದೆಡೆ ಸೇರಿ ಸರಕಾರ ವಿರುದ್ಧ ಸೆಡ್ಡು ಹೊಡೆದಿದ್ದೇವೆ...ಇದು ಚೆನ್ನೈನಲ್ಲಿ ಸಚಿವ ರೇಣುಕಾಚಾರ್ಯ ಸುದ್ದಿಗಾರರ ಜತೆ ಮಾತನಾಡುತ್ತ ನೀಡಿದ್ದ ಹೇಳಿಕೆಯಾಗಿದೆ!
ನಮ್ಮನ್ನು ಯಾವ ಗೂಂಡಾಗಳು ಹೊತ್ತೊಯ್ದಿಲ್ಲ-ಗೂಳಿಹಟ್ಟಿ: ಅತೃಪ್ತ ಶಾಸಕರನ್ನು ಗೂಂಡಾಗಳು ಕರೆದೊಯ್ದಿದ್ದಾರೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ನಮ್ಮನ್ನು ಯಾವ ಗೂಂಡಾಗಳು ಕರೆದೊಯ್ದಿಲ್ಲ. ನಾವೇ ಸ್ವಯಂ ಪ್ರೇರಣೆಯಿಂದ ಬೇರೆ ರೆಸಾರ್ಟ್‌ಗೆ ಸ್ಥಳಾಂತರ ಆಗುತ್ತಿದ್ದೇವೆ. ನಾವೇ ಬೆಂಗಳೂರಿಗೆ ಬಂದ ನಂತರ ಎಲ್ಲಾ ವಿಷಯವನ್ನು ವಿವರಿಸುವುದಾಗಿ ಹೇಳಿದರು.
ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರು ನಿಮ್ಮನ್ನು ಕರೆದೊಯ್ದಿದ್ದಾರಲ್ಲ ಎಂಬ ಪ್ರಶ್ನೆಗೆ, ಯಾವ ಜಮೀರೂ ಇಲ್ಲಾ, ಪಮೀರೂ ಇಲ್ಲ, ನಾವೇ 13 ಮಂದಿ ಅತೃಪ್ತ ಶಾಸಕರು ಒಂದೆಡೆ ಒಗ್ಗಟ್ಟಾಗಿ ಇದ್ದೇವೆ. ಸಚಿವ ರೇಣುಕಾಚಾರ್ಯ ಮಾತ್ರ ನಮ್ಮನ್ನು ಬಿಟ್ಟು ಹೊರಹೋಗಿದ್ದಾರೆ. ಇದೀಗ ಅವರೇ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಗೂಳಿಹಟ್ಟಿ ಹೇಳಿದರು.
ರೇಣುಕಾಚಾರ್ಯ ಒಬ್ಬಂಟಿ-ಬೇಳೂರು ಗೋಪಾಲಕೃಷ್ಣ: ಅತೃಪ್ತ ಶಾಸಕರು ವೈಯಕ್ತಿಕ ನಿರ್ಧಾರ ಕೈಗೊಳ್ಳಲು ಸ್ವತಂತ್ರ ಎಂಬ ನಿರ್ಧಾರಕ್ಕೆ ಬನ್ನಿ ಎಂದಾಗ, ಸಚಿವ ರೇಣುಕಾಚಾರ್ಯ ಅವರೊಬ್ಬರೇ ಬೇರೆಯಾಗಿದ್ದು, ನಾವು 13 ಮಂದಿ ಭಿನ್ನಮತೀಯ ಶಾಸಕರು ಒಗ್ಗಟ್ಟಾಗಿರುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಖಾಸಗಿ ಟಿವಿ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ. ನಮ್ಮನ್ನು ಹೊತ್ತೊಯ್ಯಲಿಕ್ಕೆ ನಾವೇನು ಸಣ್ಣ ಮಕ್ಕಳಲ್ಲ. ರೇಣುಕಾಚಾರ್ಯ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ತನಗೆ ಮನೆಯಲ್ಲಿ ಸಮಸ್ಯೆ ಇದೆ ಅಂತ ಹೇಳಿ, ರೇಣುಕಾಚಾರ್ಯ ನಮ್ಮಿಂದು ಬೇರೆಯಾಗಿದ್ದಾರೆ ಎಂದು ಬೇಳೂರು ತಿಳಿಸಿದ್ದಾರೆ.
ಭಿನ್ನಮತದ ಸೃಷ್ಟಿಕರ್ತನೇ ರೇಣುಕಾಚಾರ್ಯ-ಚೆಲುವರಾಯಸ್ವಾಮಿ: ಅತೃಪ್ತ ಶಾಸಕರನ್ನು ಜೆಡಿಎಸ್‌ನವರು ಹೊತ್ತೊಯ್ದಿದ್ದಾರೆ ಎಂಬ ರೇಣುಕಾಚಾರ್ಯ ಅವರ ಹೇಳಿಕೆಗೆ ಸಂಸದ ಚಲುವರಾಯಸ್ವಾಮಿ ಕಿಡಿಕಾರಿದ್ದು, ಭಿನ್ನಮತೀಯ ಚಟುವಟಿಕೆಯ ಮೂಲ ಪುರುಷನೇ ರೇಣುಕಾಚಾರ್ಯ, ಆತನಿಗೆ ಈ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರು ಬಲವಂತವಾಗಿ ಕರೆದುಕೊಂಡು ಹೋಗಿಲ್ಲ. ಅತೃಪ್ತರು ಸ್ವಯಂ ಪ್ರೇರಣೆಯಿಂದ ನಮ್ಮೊಂದಿಗೆ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.