ಅಪರೂಪದ ವಿಗ್ರಹ ರಕ್ಷಣೆಗೆ ವಿಶೇಷ ಕಾರ್ಯಪಡೆ ಅಗತ್ಯ: ಹೆಗ್ಗಡೆ
ಮೈಸೂರು, ಶನಿವಾರ, 9 ಅಕ್ಟೋಬರ್ 2010( 17:18 IST )
ಜೈನ ದೇವಾಲಯ ಹಾಗೂ ಬಸದಿಗಳಲ್ಲಿ ಕಳುವಾಗುತ್ತಿರುವ ಅಪರೂಪದ ವಿಗ್ರಹಗಳ ಸಂರಕ್ಷಣೆಗೆ ಸರಕಾರ ವಿಶೇಷ ಕಾರ್ಯಪಡೆಯನ್ನು ರಚಿಸುವ ಅಗತ್ಯ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಮತ್ತು ಭರತವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮೈಸೂರಿನಲ್ಲಿ ಆರಂಭವಾದ 'ಯುಗಯಾತ್ರೀ ಜೈನ ಇತಿಹಾಸ ಮತ್ತು ಸಂಸ್ಕೃತಿ' ಕುರಿತ ಮೂರು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮೂರು ದಶಕಗಳಿಂದೀಚೆಗೆ ವಿಗ್ರಹಗಳ ಕಳವು ಹೆಚ್ಚುತ್ತಲೇ ಇದೆ. ವಿಗ್ರಹಗಳೆಲ್ಲ ಗೋವಾ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ಪ್ರವೇಶಿಸುತ್ತಿವೆ. ಕನಿಷ್ಠ 500 ವರ್ಷಗಳಷ್ಟು ಪ್ರಾಚೀನವಾದ ವಿಗ್ರಹಗಳನ್ನು ರಕ್ಷಿಸಿಕೊಳ್ಳಲು, ಅಲ್ಪಸಂಖ್ಯಾತ ಜೈನರಿಗೆ ಸಾಧ್ಯವಾಗುತ್ತಿಲ್ಲ. ಕಳುವಾಗಿರುವ ವಿಗ್ರಹಗಳ ಪೈಕಿ ಶೇ.10ರಷ್ಟು ಕೂಡ ಸಿಕ್ಕಿಲ್ಲ. ಹಾಗಾಗಿ ಜೈನ ಸಂಸ್ಕೃತಿಯನ್ನು ಸಾರುವ ಇಂತಹ ವಿಗ್ರಹಗಳ ಸಂರಕ್ಷಣೆಗೆ ಸರಕಾರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರಾಜ್ಯದ ಬಹಳಷ್ಟು ಭಾಗಗಳಲ್ಲಿ ಪಾಳು ಬಿದ್ದಿರುವ ದೇವಾಲಯಗಳು, ಬಸದಿಗಳನ್ನು ನಿರ್ವಹಿಸಲು ಜೈನರಿಗೆ ಸಾಧ್ಯವಾಗುತ್ತಿಲ್ಲ. ಒಂದೊಂದು ಪ್ರದೇಶದಲ್ಲಿ ಜೈನರೇ ಇರುವುದಿಲ್ಲ. ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಕೂಡ ಈ ವಿಷಯದಲ್ಲಿ ಅಸಹಾಯಕವಾಗಿದೆ.
ರಾಜ್ಯದ ವಿವಿಧ ಕಡೆ ಒಟ್ಟು 110 ದೇವಾಲಯಗಳನ್ನು ಸಂರಕ್ಷಣೆಗಾಗಿ ಗುರುತಿಸಲಾಗಿದೆ. ಈ ಪೈಕಿ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಮೂಲಕ 15 ದೇವಾಲಯಗಳನ್ನು ಸಂರಕ್ಷಿಸಿ, ಜೀರ್ಣೋದ್ಧಾರ ಮಾಡಲಾಗಿದೆ. ಸಂರಕ್ಷಿಸಿರುವ ದೇಗುಲಗಳ ಪೈಕಿ 23 ದೇವಾಲಯಗಳು ದಿಗಂಬರ ಜೈನರಿಗೆ ಸೇರಿವೆ. ಈ ಎಲ್ಲ ದೇವಾಲಯಗಳನ್ನು ಹಿಂದೂಗಳೇ ಸಂರಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.