ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಪರಿಹಾರವಾಗಿದ್ದು ಅ. 11 ರಂದು ಬಹುಮತ ಸಾಬೀತು ಪಡಿಸುವುದು ಶತಸಿದ್ಧ ಎಂದು ಸಚಿವ ಬಿ.ಶ್ರೀರಾಮುಲು ವಿಶ್ವಾಸವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅತೃಪ್ತ ಶಾಸಕರ ಮನವೊಲಿಸುವ ಕಾರ್ಯದಲ್ಲಿ ಸಚಿವ ಜನಾರ್ದನ ರೆಡ್ಡಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸರಕಾರ ಸುಭದ್ರವಾಗಿದೆ. ನಿರೀಕ್ಷೆಯಂತೆ ಅ. 11 ರಂದು ಬಹುಮತ ಸಾಬೀತು ಪಡಿಸುತ್ತೇವೆ ಎಂದರು.
ಗೋವಾ ರೆಸಾರ್ಟ್‌ಗೆ ಹೋಗಿರುವ ಸಚಿವ, ಶಾಸಕರು ಭಿನ್ನಮತೀಯರಲ್ಲ. ಅವರು ಅಸಮಾಧಾನಿತರಷ್ಟೇ. ಕೆಲ ಹಿರಿಯ ನಾಯಕರ ಮಾತಿನಿಂದ ಮನಸ್ಸಿಗೆ ನೋವಾಗಿ, ಜತೆಗೆ ತಮ್ಮ ಕ್ಷೇತ್ರದಲ್ಲಿ ಪ್ರಗತಿ ಕಾರ್ಯ ಕೈಗೊಳ್ಳಲು ಅಗತ್ಯ ಆರ್ಥಿಕ ನೆರವು ಸಿಗದಿರುವ ಕಾರಣದಿಂದ ಮುನಿಸಿಕೊಂಡಿದ್ದಾರೆ. ಇವರೊಂದಿಗೆ ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ಮುಖ್ಯಮಂತ್ರಿಗಳು ಮಾತುಕತೆ ನಡೆಸಿದ್ದಾರೆ.
ಯಾವುದೇ ಅಸಮಾಧಾನವಿದ್ದರೆ ಪಕ್ಷದ ವೇದಿಕೆಯಲ್ಲಿ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ. ಅಲ್ಲದೇ, ಅಸಮಾಧಾನಕ್ಕೆ ಪರಿಹಾರ ಸೂತ್ರ ಕಂಡುಹಿಡಿಯೋಣ ಎಂದಿದ್ದಾರೆ. ಈ ಮಾತಿಗೆ ಅಸಮಾಧಾನಿತ ಸಚಿವ, ಶಾಸಕರು ಸಹಮತ ಸೂಚಿಸಿದ್ದು, ಜನಾರ್ದನ ರೆಡ್ಡಿಯವರು ಇವರನ್ನು ಬೆಂಗಳೂರಿಗೆ ಕರೆತರಲಿದ್ದಾರೆ. ಅಸಮಾಧಾನಿತರು ಯಾವುದೇ ಶರತ್ತು ವಿಧಿಸಿಲ್ಲ.
ಮಂತ್ರಿ ಕುರ್ಚಿಗೆ ಅಂಟಿ ಕುಳಿತುಕೊಳ್ಳುವ ಆಸೆ ನನಗಿಲ್ಲ. ಪಕ್ಷದ ಹಿತಕ್ಕಾಗಿ ನಾನು ಯಾವಾಗ ಬೇಕಾದರೂ ರಾಜೀನಾಮೆ ನೀಡಲು ಸಿದ್ಧ. ಪಕ್ಷಕ್ಕೆ ಅನಿವಾರ್ಯ ಪ್ರಸಂಗ ಒದಗಿ ಬಂದರೆ ಮುಖ್ಯಮಂತ್ರಿಗಳು ನನ್ನ ರಾಜೀನಾಮೆ ಕೇಳಲಿ. ಆ ಕ್ಷಣದಲ್ಲಿಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು.
ನಾನು ಎರಡು ಬಾರಿ ಸಚಿವನಾಗಿದ್ದೇನೆ. ಹೊಸಬರಿಗೆ ಹಾಗೂ ಮೂರ್ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿಗಳಲ್ಲಿ ವ್ಯಕ್ತಪಡಿಸಿದ್ದೇನೆ. ಮುಖ್ಯಮಂತ್ರಿಗಳು ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಬೇಕೆಂದು ಬಯಸಿದರೆ ನನ್ನ ಸ್ಥಾನ ತ್ಯಾಗ ಮಾಡಿ ಅಂತವರಿಗೆ ನೀಡಲು ಸದಾ ಸಿದ್ಧ ಎಂದು ಹೇಳಿದರು.