ಕಾಂಗ್ರೆಸ್-ಜೆಡಿಎಸ್ ತಿರುಕನ ಕನಸು ಕಾಣುತ್ತಿದ್ದು, ಬಿಜೆಪಿ ಸರಕಾರ ಸುಭದ್ರವಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ವಿಶ್ವಾಸವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಹಾಗೂ ಸಚಿವ ಜನಾರ್ದನ ರೆಡ್ಡಿ ಬಿಕ್ಕಟ್ಟು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಪೂರ್ವನಿರ್ಧಾರದಂತೆ ಅ. 11 ರಂದು ಪಕ್ಷ ಬಹುಮತ ಸಾಬೀತುಪಡಿಸಲಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಪಕ್ಷದಲ್ಲಿ ಉದ್ಭವಿಸಿದ್ದ ಅಸಮಾಧಾನದ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಹವಣಿಸಿದ್ದವು. ಆದರೆ ಅದು ತಿರುಕನ ಕನಸಲ್ಲದೇ ಮತ್ತೇನೂ ಅಲ್ಲ ಎಂದರು.
ಬಿಜೆಪಿ ಸಂಪೂರ್ಣ ಐದು ವರ್ಷ ಉತ್ತಮ ಆಡಳಿತ ನೀಡಲಿದ್ದು, ಮುಂದೆಯೂ ನೀಡಲಿದೆ. ಸದ್ಯ ಪಕ್ಷದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಆದರೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಹಿನ್ನಡೆಯಾಗುತ್ತಿಲ್ಲ ಎಂದು ಹೇಳಿದರು.