ರಾಜ್ಯ ಸರಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಅವರೇ ಕಾರಣರು ಎಂದು ಆರೋಪಿಸಿರುವ ಬಿಜೆಪಿ, ಇದಕ್ಕೆ ಸಂಬಂಧಿಸಿದ ಧ್ವನಿಮುದ್ರಣ ಸಾಕ್ಷ್ಯವನ್ನು ಬಿಡುಗಡೆಗೊಳಿಸಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ದೂರವಾಣಿ ಕರೆ ಮಾಡಿರುವ ಕುಮಾರಸ್ವಾಮಿ, ಭಿನ್ನಮತೀಯರ ಗುಂಪು ಸೇರುವಂತೆ ಆಹ್ವಾನ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಇದರೊಂದಿಗೆ ಶಾಸಕರನ್ನು ಸೆಳೆಯಲು ಕುಮಾರಸ್ವಾಮಿ ನೇರವಾಗಿ ಪ್ರಯತ್ನಿಸಿರುವುದಕ್ಕೆ ಸಂಬಂಧಿಸಿದಂತೆ ಸಾಕ್ಷ್ಮವನ್ನು ಬಿಜೆಪಿ ಒದಗಿಸಿದೆ. ಸರಕಾರವನ್ನು ಉರುಳಿಸುವ ಕಾರ್ಯತಂತ್ರದೊಂದಿಗೆ ಕುಮಾರಸ್ವಾಮಿ ಭಿನ್ನಮತೀಯರಿಗೆ ಪ್ರೇರೆಪಣೆ ನೀಡುತ್ತಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ.
ಅದಿರು ಸಾಗಣೆ ನಿಷೇಧಕ ಬಳಿಕ ಸಿಟ್ಟಿಗೆದ್ದಿರುವ ಕೆಲ ಗಣಿ ದಣಿಗಳ ಬೆಂಬಲದೊಂದಿಗೆ ಇಂತಹ ಕೆಲಸ ನಡೆಯುತ್ತಿದೆ. ಆದರೆ ಸರಕಾರ ಸೋಮವಾರ ಬಹುಮತ ಸಾಬೀತುಪಡಿಸಲು ಯಶಸ್ವಿಯಾಗಲಿದೆ ಎಂದು ಹೇಳಿದೆ.
ಮತ್ತೊಂದೆಡೆ ಹೇಳಿಕೆ ನೀಡಿರುವ ಶಾಸಕ ಅಪ್ಪಚ್ಚು ಭಿನ್ನಮತೀಯರನ್ನು ಬೆಂಬಲಿಸುವಂತೆ ತನಗೂ ಕುಮಾರಸ್ವಾಮಿ ಆಮಿಷವೊಡ್ಡಿರುವುದಾಗಿ ಆರೋಪಿಸಿದರು.