ಅತೃಪ್ತ ಶಾಸಕರೊಂದಿಗೆ ಗೋವಾದಲ್ಲಿ ನಡೆಸಿದ ಮಾತುಕತೆಯು ವಿಫಲಗೊಂಡಿರುವ ಹೊರತಾಗಿಯೂ ಸೋಮವಾರದಂದು ಬಿಜೆಪಿ ಸರಕಾರ ಬಹುಮತ ಸಾಬೀತುಪಡಿಸುವುದು ಖಚಿತ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಹಲವು ವಿದ್ಯಾಮಾನಗಳು ನಡೆಯುತ್ತಿರುವ ನಡುವೆ ಬೆಂಗಳೂರಿನಲ್ಲಿ ಸಚಿವ ರೆಡ್ಡಿ ಹೇಳಿಕೆ ನೀಡಿದ್ದಾರೆ. 'ಸೋಲನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಗೋಲಿ ಆಡುವ ವಯಸ್ಸಿನಿಂದ ನಾನು ಸೋಲನ್ನು ಕಂಡವನಲ್ಲ. ಆರು ಕೋಟಿ ಕನ್ನಡಿಗರ ಆಶೀರ್ವಾದದೊಂದಿಗೆ ನಾಳೆ ಸರ್ಕಾರ ಬಹುಮತ ಸಾಬೀತುಪಡಿಸಲಿದೆ' ಎಂದವರು ಹೇಳಿದರು.
ನಾವು ಈಗಾಗಲೇ ಸಂಪೂರ್ಣ ಬಹುಮತ ಗಳಿಸಿದ್ದೇವೆ. ಇಲ್ಲಿ ಶಾಸಕರು ಆ ಕಡೆ ಅಥವಾ ಈ ಕಡೆ ಎಂಬ ಪ್ರಶ್ನೆಯೇ ಇಲ್ಲ. ಭಾರಿ ಬಹುಮತದಿಂದ ನಮ್ಮ ಗೆಲುವು ಸುನಿಶ್ಚಿತ ಎಂದವರು ಸೇರಿಸಿದರು.
ಎಚ್‌ಡಿಕೆ ಸನ್ಯಾಸ ಸ್ವೀಕರಿಸಲಿ... ಅದೇ ಹೊತ್ತಿಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿರುವ ರೆಡ್ಡಿ, ಎಚ್‌ಡಿಕೆ ರಾಜಕೀಯ ಸನ್ಯಾಸ ಸ್ವೀಕರಿಸಿದರೆ ಒಲಿತು ಎಂದು ವ್ಯಂಗ ಮಾಡಿದ್ದಾರೆ. ಇದರಿಂದ ರಾಜ್ಯ ಜನತೆಗೆ ಶಾಂತಿ ಹಾಗೂ ನೆಮ್ಮದಿ ಲಭಿಸಲಿದೆ ಎಂದವರು ಹೇಳಿದರು.
ಕರ್ನಾಟಕದ ರಾಜಕೀಯ ಬೆಳವಣಿಗೆಯನ್ನು ರಾಜ್ಯದ ಸಹಿತ ಇಡೀ ದೇಶದ ಜನತೆಯೇ ನೋಡುತ್ತಿದೆ. ನಮ್ಮ ರಾಷ್ಟ್ರೀಯ ನಾಯಕರು ಕೂಡಾ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳ ಸುಭದ್ರ ಆಡಳಿತೆಗೆ ಅಡ್ವಾಣಿ, ವೆಂಕಯ್ಯ ನಾಯ್ಡು, ಸುಶ್ಮಾ ಸ್ವರಾಜ್ ಅವರ ಬೆಂಬಲವೂ ಇದೆ. ಹೀಗಾಗಿ ಬಹುಮತ ಗಳಿಸುವುದರಲ್ಲಿ ಎರಡು ಮಾತಿಲ್ಲ ಎಂದವರು ಹೇಳಿದರು.