ರಾಜ್ಯ ಬಿಜೆಪಿ ಸರಕಾರ ಮಾಡಿರುವ ಗಂಭೀರ ಆರೋಪಗಳನ್ನು ತಳ್ಳಿ ಹಾಕಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ, ನಾವು ಯಾವುದೇ ಶಾಸಕರನ್ನು ಕಟ್ಟಿ ಹಾಕಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.
ಯಾವುದೇ ಅತೃಪ್ತ ಶಾಸಕರನ್ನು ನಾವು ಹಿಡಿದಿರಿಸಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಮೇಲೆ ಆರೋಪ ಮಾಡುತ್ತಿರುವುದು ಬಿಜೆಪಿನ ಸಣ್ಣತನ ಎಂದು ಕಿಡಿ ಕಾರಿದ್ದಾರೆ.
ಶಾಸಕರೆಲ್ಲಾ ತಮ್ಮ ಜವಾಬ್ದಾರಿಯನ್ನು ಅರಿತ ಜನಪ್ರತಿನಿಧಿಗಳಾಗಿದ್ದಾರೆ. ಅಲ್ಲದೆ ತಮ್ಮ ಕ್ಷೇತ್ರದ 2 ಲಕ್ಷಕ್ಕೂ ಹೆಚ್ಚು ಮಂದಿಗೆ ಜನನಾಯಕರಾಗಿದ್ದಾರೆ. ಹೀಗಿರುವಾಗ ಅವರೆಲ್ಲ ನಿರ್ಧಾರ ಕೈಗೊಳ್ಳುವಲ್ಲಿ ಸ್ವತಂತ್ರರಾಗಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಅವರಿಗೆಲ್ಲಾ ಅವರ ತೀರ್ಮಾನದ ಬಗ್ಗೆ ಅರಿವಿದ್ದು, ಬಿಜೆಪಿ ವಿನಾ ಕಾರಣ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.
ಇದರಲ್ಲಿ ಬಿಜೆಪಿ ಶಾಸಕರು ಇದ್ದಾರೆ ಎಂದು ಹೇಳುವುದಕ್ಕಿಂತ ನಾವೆಲ್ಲಾ ಸಮಾನ ಮನಸ್ಕರಾಗಿದ್ದೇವೆ. ನಾವೆಲ್ಲಾ ರಾಜ್ಯದ ಜನತೆಯ ಹಿತದೃಷ್ಟಿಯ ಉದ್ದೇಶದೊಂದಿಗೆ ಒಂದಾಗಿದ್ದೇವೆ ಎಂದವರು ಹೇಳಿದರು.
ಅದೇ ಹೊತ್ತಿಗೆ ಸರಕಾರ ಪತನ ಖಚಿತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇವೆಲ್ಲವೂ ಅಕ್ಟೋಬರ್ 11ಕ್ಕೆ ವ್ಯಕ್ತವಾಗಲಿದೆ ಎಂದು ಹೇಳಿದರು.