ಹಣ ಬಲದ ರಾಜಕಾರಣದಿಂದಾಗಿ ಸಾಂಪ್ರದಾಯಿಕ ರಾಜಕೀಯ ಮಾರ್ಗ ಬದಲಾಗುತ್ತಿದೆ ಎಂದು ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೇಳಿದ್ದಾರೆ.
ನಗರದ ಸಪ್ನ ಬುಕ್ ಹೌಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಎಚ್.ವಿಶ್ವನಾಥ್ ಅವರ ಆತ್ಮಕಥನ `ಹಳ್ಳಿ ಹಕ್ಕಿ ಹಾಡು' ಇಂಗ್ಲಿಷ್ ಅವತರಣಿಕೆ `ದ ನೇಟಿವ್ ಬರ್ಡ್ ಸಿಂಗ್ಸ್' ಅನ್ನು ಬಿಡುಗಡೆ ಮಾಡಿ ಮಾತನಾಡಿದರು.
ದುಡ್ಡಿನ ಶ್ರೀಮಂತಿಕೆ ಮೇಲೆಯೇ ರಾಜಕಾರಣ ಮಾಡುತ್ತಿರುವವರು ಹಿರಿಯ ತಲೆಮಾರಿನ, ಬದ್ಧತೆಯ ರಾಜಕಾರಣಿಗಳನ್ನು ಸ್ಥಾನ ಪಲ್ಲಟಗೊಳಿಸುತ್ತಿದ್ದಾರೆ ಎಂದ ಅವರು, ಬಳ್ಳಾರಿ ರೆಡ್ಡಿ ಸಹೋದರರನ್ನು ಇದಕ್ಕೆ ಉದಾಹರಣೆಯನ್ನಾಗಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರಂತವರು 40 ವರ್ಷ ರಾಜಕೀಯ ಮಾಡಿಕೊಂಡು ಮೇಲೆ ಬಂದವರು. ಆದರೆ, ಈ ರೆಡ್ಡಿಗಳು 10 ವರ್ಷದ ಹಿಂದೆ ಏನೂ ಆಗಿರಲಿಲ್ಲ. ರಾಜಕೀಯ ಅನುವಂಶಿಕ ಹಿನ್ನೆಲೆಯೂ ಅವರದ್ದಲ್ಲ. ಆದರೂ ರಾಜಕೀಯವನ್ನು ಅಲ್ಲಾಡಿಸುತ್ತಿದ್ದಾರೆ. ಇದು ದೊಡ್ಡ ಅಪಾಯ. ಇಂಥವರು ಸಾರ್ವಜನಿಕರ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವುದೂ ಇಲ್ಲ ಎಂದು ಆಕ್ಷೇಪಿಸಿದರು. `ಹಳೆಯ ಗಡಿಗೆ ಹೆಚ್ಚು ನೀರು ಹೀರುವುದಿಲ್ಲ, ಹೊಸ ಗಡಿಗೆ ಹೆಚ್ಚು ತುಪ್ಪ ಕುಡಿಯುತ್ತದೆ' ಎಂಬ ಮಾತನ್ನು ಪ್ರಸ್ತುತ ರಾಜಕೀಯಕ್ಕೆ ಹೋಲಿಸಿದರು.
ಮೊದಲೆಲ್ಲ ರಾಜಕಾರಣದಲ್ಲಿ ಶೇ.80 ಜಾತಿ, ಶೇ.20 ಹಣ ಬಲ ಕೆಲಸ ಮಾಡುತ್ತಿತ್ತು. ಈಗ ಪ್ರಮಾಣ ಅದಲು ಬದಲಾಗಿದೆ. ಹಣವೇ ಪ್ರಧಾನವಾಗಿ ಕೆಲಸ ಮಾಡುತ್ತಿರುವುದು ಪ್ರಸಕ್ತ ರಾಜಕೀಯ ವಿದ್ಯಮಾನಗಳಿಂದ ವೇದ್ಯ.`ವಿಧಾನ ಸೌಧ ಸದಾ ಸುಂದರಿ. ಅಲ್ಲಿ ಅತೃಪ್ತ ಆತ್ಮಗಳು ಅಲೆದಾಡುತ್ತಿವೆ' ಎಂದು ವಿಶ್ವನಾಥ್ ಬರೆದಿದ್ದಾರೆ. ಆದರೆ ಈಗ ಆ ಸೌಧ ಯಾರು ಜಾಸ್ತಿಗೆ ಬಿಡ್ ಮಾಡುತ್ತಾರೋ ಅವರಿಗೆ ಒಲಿಯುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.