ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ 16 ಮಂದಿ ಅತೃಪ್ತ ಶಾಸಕರ ಸದಸ್ಯತ್ವವನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ.
ವಿಶ್ವಾಸಮತಯಾಚನೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಂತೆಯೇ ರಾಜ್ಯ ರಾಜಕೀಯದಲ್ಲಿ ಈ ಮಹತ್ವದ ಬೆಳವಣಿಗೆ ಕಂಡುಬಂದಿದೆ.
ಪಕ್ಷೇತರರು ಸೇರಿದಂತೆ ಒಟ್ಟು 16 ಮಂದಿ ಶಾಸಕರ ಸದಸ್ಯತ್ವವನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಆ ಮೂಲಕ ಸದನದ ಸಂಖ್ಯಾ ಬಲ 208ಕ್ಕಿಳಿದಿದೆ. ಇದರಿಂದ ಯಡಿಯೂರುಪ್ಪ ನೇತೃತ್ವದ ಬಿಜೆಪಿ ಸರಕಾರ ಇಂದು ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ವಿಜಯಾಗಿಗುವ ನಿರೀಕ್ಷೆಯಲ್ಲಿದೆ.
ಸೋಮವಾರ ಬೆಳಗ್ಗೆ ಸ್ಪೀಕರ್ ಕೆ.ಜಿ ಬೋಪಯ್ಯ ಹೊರಡಿಸಿರುವ ಆದೇಶದಲ್ಲಿ ಸಚಿವ ಎಂ. ಪಿ. ರೇಣುಕಾಚಾರ್ಯ ಸಹಿತ 16 ಮಂದಿ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಿದ್ದಾರೆ. ಇದರಿಂದಾಗಿ 208 ಮಂದಿ ಮಾತ್ರ ವಿಶ್ವಾಸಮತ ಚಲಾಯಿಸುವ ಹಕ್ಕನ್ನು ಪಡೆಯಲಿದ್ದಾರೆ.
ಶಾಸಕರಾದ ಎಸ್. ಕೆ. ಬೆಳ್ಳುಬ್ಬಿ, ಆನಂದ್ ಆಸ್ನೋಟಿಕರ್, ಶಂಕರಲೀಗೇಗೌಡ, ಬೇಳೂರು ಗೌಪಾಲಕೃಷ್ಣ, ಶಿವನಗೌಡ ನಾಯಕ್, ವೆಂಕಟರಮಣಪ್ಪ, ಶಿವರಾಜ್ ತಂಗಡಗಿ, ಗೂಳಿಹಟ್ಟಿ ಶೇಖರ್, ಡಿ. ಸುಧಾಕರ್, ನರೇಂದ್ರಸ್ವಾಮಿ, ನಂಜುಂಡಸ್ವಾಮಿ, ಎಂ. ವಿ. ನಾಗರಾಜ್, ಬಾಲಚಂದ್ರ ಜಾರಕಿಹೊಳಿ, ಸಾರಭೌಮ ಬಗಲಿ, ವೈ. ಸಂಪಂಗಿ, ರಾಜು ಕಾಗೆ ಅವರುಗಳ ಸದಸ್ಯತ್ವನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ.
ಅದೇ ಹೊತ್ತಿಗೆ ಸ್ಪೀಕರ್ ತಡೆಯಾಜ್ಞೆ ತೀರ್ಪಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅತೃಪ್ತ ಶಾಸಕರು ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ತಿಳಿಸಿದ್ದು, ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.