ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ವಿಶ್ವಾಸಮತ ಸಾಬೀತುಪಡಿಸುವ ಪ್ರಕ್ರಿಯೆ ಸಂವಿಧಾನಕ್ಕೇ ಕಳಂಕವಾಗಿದೆ. ಕರ್ನಾಟಕ ಇತಿಹಾಸದಲ್ಲಿಯೇ ಕಂಡು ಕೇಳರಿಯದ ತುಚ್ಛ ರಾಜಕೀಯಕ್ಕೆ ವೇದಿಕೆಯಾಗಿರುವ ವಿಧಾನಸೌಧದಲ್ಲಿ, ಸಂಘರ್ಷ, ಕಿತ್ತಾಟ, ಹೊಡೆದಾಟ, ಬೈಗುಳ ಬೆಳಗ್ಗಿನಿಂದಲೇ ಆರಂಭವಾಗಿದ್ದು, ಕರ್ನಾಟಕದ ಹೆಸರು ಬೇಡವಾದ ವಿಷಯಕ್ಕೆ ವಿಶ್ವದಲ್ಲೇ ಕುಖ್ಯಾತಿ ಪಡೆಯುತ್ತಿದೆ.
ಅನರ್ಹಗೊಂಡ ಶಾಸಕರು ವಿಧಾನಸೌಧ ಪ್ರವೇಶಿಸಲು ಮಾರ್ಷಲ್‌ಗಳೊಂದಿಗೆ ಕಿತ್ತಾಡಿದ್ದು, ಮಾರ್ಷಲ್‌ಗಳಿಗೇ ಕಪಾಳಮೋಕ್ಷ ಮಾಡಿದವರು ನಮ್ಮ ಜನ 'ನಾಯಕರು'. ಒಬ್ಬ ಮಾರ್ಷಲ್ ಅವರಂತೂ ತೀವ್ರವಾಗಿ ಏಟು ತಿಂದು ಕುಸಿದುಬಿದ್ದು ಆಸ್ಪತ್ರೆಗೇ ಸೇರಿಸಲ್ಪಟ್ಟರು
ಮಾಧ್ಯಮಗಳಿಗೆ ಕೂಡ ಸದನದ ಕಲಾಪದವನ್ನೆಲ್ಲಾ ಪ್ರಸಾರ ಮಾಡದಂತಿರಲು ನಿರ್ಬಂಧ ಹೇರಲಾಗಿರುವುದು ಪ್ರಜಾತಂತ್ರ ವ್ಯವಸ್ಥೆಗೇ ಕಪ್ಪು ಚುಕ್ಕೆಯಾಗಿ ಪರಿಣಮಿಸಿತು.
ಸದನದೊಳಗೆಯೇ ಸಮವಸ್ತ್ರಧಾರಿ ಪೊಲೀಸರು ಕೂಡ ಪ್ರವೇಶಿಸಿರುವುದು ಪ್ರತಿಪಕ್ಷಗಳ ತೀವ್ರ ಆಕ್ಷೇಪಕ್ಕೆ ಗುರಿಯಾದರು. ಪೊಲೀಸ್ ಮುಖ್ಯಸ್ಥ ಶಂಕರ ಬಿದರಿ ಅವರೊಂದಿಗೆ ಪ್ರತಿಪಕ್ಷ ಮುಖಂಡರಾದ ಸಿದ್ದರಾಮಯ್ಯ, ಎಚ್.ಡಿ.ರೇವಣ್ಣ ಮಾತಿನ ಚಕಮಕಿ ಕೂಡ ನಡೆದು ಹೇಯ ಘಟನೆಗಳಿಗೆ ಸಾಕ್ಷಿಯಾಯಿತು ವಿಧಾನಸೌಧ.