ಜೆಡಿಎಸ್ ಮತ್ತು ಕಾಂಗ್ರೆಸ್ ಹೆಣೆದ ಎಲ್ಲಾ ತಂತ್ರಗಳು ವಿಫಲವಾಗಿ, ಸರಕಾರ ಸುಭದ್ರವಾಗಿದೆ ಎಂದು ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ಘೋಷಿಸಿದ್ದರಿಂದ ನಿರಾಸೆಗೊಂಡ ಬಳಿಕ ಅನರ್ಹ ಪಕ್ಷೇತರ ಶಾಸಕ ಮೆರೆದಾಡಿದ ಪರಿಯಿದು.
ಕಳೆದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತನ್ನನ್ನು ಸಂಪುಟದಿಂದ ಕೈ ಬಿಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ನಗೆಪಾಟಲಿಗೀಡಾಗಿದ್ದ ಗೂಳಿಹಟ್ಟಿ ಶೇಖರ್, ಇಂದು ತನ್ನ ಅಂಗಿಯನ್ನು ಹರಿದುಕೊಂಡು ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.
ಭಾರೀ ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ಮತ ಯಾಚಿಸಿದರು. ಇದನ್ನು ಧ್ವನಿಮತದ ಮೂಲಕ ಅಂಗೀಕರಿಸಿದ ಸ್ಪೀಕರ್, ಸರಕಾರ ವಿಶ್ವಾಸ ಮತ ಗೆದ್ದಿದೆ ಎಂದು ಘೋಷಿಸಿದರು.
ಇದರಿಂದ ತೀವ್ರ ನಿರಾಸೆಗೊಂಡ ಗೂಳಿಹಟ್ಟಿ 'ಲಬೋ-ಲಬೋ' ಎಂದು ಬಾಯಿಬಾಯಿ ಬಡಿದುಕೊಂಡು ಕೂಗಾಡಿದರು. ಎಲ್ಲವನ್ನೂ ಕಳೆದುಕೊಂಡ ರೀತಿಯ ಹತಾಶೆಯು ಅವರಲ್ಲಿ ಇಷ್ಟಕ್ಕೆ ನಿಲ್ಲಿಸದೆ, ಸ್ವತಃ ತನ್ನ ಅಂಗಿ ಮತ್ತು ಬನಿಯನ್ನನ್ನು ಹರಿದು ಹಾಕಿ, ಎದೆ ಬಗೆದು ತೋರಿಸುವಂತೆ ಕೂಗಾಟ ನಡೆಸಿದರು.
ಈ ಸಂದರ್ಭದಲ್ಲಿ ವಿಧಾಸಭೆಯ ಶಾಸಕರುಗಳ ಆಸನಗಳ ಮೇಲೇರಿದ ಗೂಳಿಹಟ್ಟಿ, ಇತರ ಶಾಸಕರ ಜತೆ ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.