ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸ್ಪೀಕರ್ ಕ್ರಮವೇ ತಪ್ಪು; ಆರ್‌ವಿ; ಅಯ್ಯೋ ದೇವ್ರೇ ಎಂದ ಗೌಡ (Vidhana Soudha | BJP Government | Congress | Karnataka Crisis | Vote of Confidence)
Bookmark and Share Feedback Print
 
ಅಕ್ಟೋಬರ್ 6ರಂದು ಇದ್ದ ಸದನದ ಬಲಾಬಲ ಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳದೇಹೋದರೆ ತಾನು ತನ್ನ ಸಾಂವಿಧಾನಿಕ ಅಧಿಕಾರ ಚಲಾಯಿಸಬೇಕಾಗುತ್ತದೆ ಎಂದು ಸ್ಪೀಕರ್‌ಗೆ ರಾಜ್ಯಪಾಲರು ಈ ಮೊದಲೇ ಎಚ್ಚರಿಕೆ ನೀಡಿದ್ದರ ಹಿನ್ನೆಲೆಯಲ್ಲಿ, ಇದೀಗ ಕೇಂದ್ರವು ಮಧ್ಯಪ್ರವೇಶ ಮಾಡುತ್ತದೆಯೇ ಎಂಬ ಶಂಕೆಗಳ ನಡುವೆ, ಸ್ಪೀಕರ್ ಕ್ರಮವು ಪ್ರತಿಪಕ್ಷಗಳಿಂದ ಭಾರೀ ಟೀಕೆಗೆ ಗುರಿಯಾಗಿದೆ.

ತಾಜಾ ಸುದ್ದಿಗಳ ಪ್ರಕಾರ, ಪ್ರತಿಪಕ್ಷಗಳು ರಾಜ್ಯಪಾಲರ ಎದುರು ತಮ್ಮ ಬಲಾಬಲ ಪ್ರದರ್ಶನ ಮಾಡಲು, ಪೆರೇಡ್ ಮಾಡಲು ನಿರ್ಧರಿಸಿದೆ. ಜೆಡಿಎಸ್ 27, ಕಾಂಗ್ರೆಸ್ 73, ಭಿನ್ನಮತೀಯ ಬಿಜೆಪಿಯ 11 ಹಾಗೂ ಸ್ವತಂತ್ರ 6 ಶಾಸಕರು, ಹೀಗೆ 118 ಮಂದಿ ಶಾಸಕರು ಪೆರೇಡ್‌ನಲ್ಲಿ ತೆರಳುವುದಾಗಿ ಮಾಜಿ ಮುಖ್ಯಮಂತ್ರಿ, ಈ ಬಂಡಾಯದ ಬೆನ್ನ ಹಿಂದಿರುವ ಶಕ್ತಿ ಎಂದೇ ಪರಿಗಣಿಸಲಾಗಿರುವ ಕುಮಾರಸ್ವಾಮಿ ಹೇಳಿದ್ದಾರೆ.

ಸಂವಿಧಾನದ ಕಗ್ಗೊಲೆ ಎಂದ ದೇಶಪಾಂಡೆ...
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಆರ್.ವಿ.ದೇಶಪಾಂಡೆ, ಇದು ಶಾಸಕಾಂಗದ ಇತಿಹಾಸದಲ್ಲೇ ಕಳಂಕ. ಸಂವಿಧಾನದ ಕಗ್ಗೊಲೆಯಾಗಿದೆ. ಸಭಾಪತಿಗಳು ಸರಕಾರದ, ಪಕ್ಷದ ಕೈಗೊಂಬೆಯಾಗಿ ಭಾರೀ ದೊಡ್ಡ ಅಪರಾಧ, ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದರು.

ಸದನದಲ್ಲಿ ವ್ಯವಸ್ಥೆಯೇ ಇರಲಿಲ್ಲ. ಸಿದ್ದರಾಮಯ್ಯ, ರೇವಣ್ಣ ಮುಂತಾದವರಿಗೆ ಸದನ ಪ್ರವೇಶವೇ ಕಷ್ಟವಿತ್ತು. ಇದು ಸಂವಿಧಾನಕ್ಕೆ ಅಪಚಾರ, ಕನ್ನಡ ನಾಡಿನ ಜನಕ್ಕೆ ಅಪಮಾನ ಎಂದ ದೇಶಪಾಂಡೆ, ಮುಖ್ಯಮಂತ್ರಿಗೆ ಒಂದು ಕ್ಷಣವೂ ಅಧಿಕಾರದಲ್ಲಿರುವ ಹಕ್ಕಿಲ್ಲ, ತಕ್ಷಣವೇ ಸರಕಾರವನ್ನು ವಜಾಮಾಡಬೇಕು ಎಂದು ರಾಜ್ಯಪಾಲರನ್ನು ಆಗ್ರಹಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಮಾತನಾಡಿ, ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ ಎಂದರಲ್ಲದೆ ಸ್ಪೀಕರ್ ವಿರುದ್ಧ ಕೆಂಡ ಕಾರಿ, ರಾಜ್ಯಪಾಲರು ಸಂವಿಧಾನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಯ್ಯೋ ದೇವಾ... ಎಂದ ದೇವೇಗೌಡ...
ಧ್ವನಿಮತದ ಮೇಲೆ ವಿಶ್ವಾಸ ಸಾಬೀತುಮಾಡಿದ್ದಾರೇನ್ರೀ.... ಅಯ್ಯೋ ದೇವಾ... ಎಂದು ಪ್ರತಿಕ್ರಿಯಿಸಿದವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ.

ದೇಶದ ರಾಜಕೀಯ ಇತಿಹಾಸದಲ್ಲಿ ಇಷ್ಟೊಂದು ಲಜ್ಜೆಗೆಟ್ಟ ವರ್ತನೆ ತೋರಿದ ಮುಖ್ಯಮಂತ್ರಿಯನ್ನು ಎಂದಿಗೂ ನೋಡಿಲ್ಲ ಎಂದರಲ್ಲದೆ ಸ್ಪೀಕರ್ ಸ್ಥಾನದಲ್ಲಿ ಯಾರೋ ಬೋಪಯ್ಯ ಎಂಬವರು ಕುಳಿತುಕೊಂಡು ತಮ್ಮ ಸ್ಥಾನದ ಗೌರವವನ್ನೇ ನಾಶ ಮಾಡಿದರು ಎಂದು ದೇವೇಗೌಡ ಆರೋಪಿಸಿದರು.

ರಾಜ್ಯಪಾಲರ ಆದೇಶದ ಪ್ರಕಾರ, ಅ.6ರ ಬಲಾಬಲ ಪ್ರಕಾರವೇ ವಿಶ್ವಾಸಮತ ಕಲಾಪ ನಡೆಯಬೇಕೆಂಬುದನ್ನು ಧಿಕ್ಕರಿಸಲಾಗಿದೆ ಎಂದರು.

ವಿಧಾನಸೌಧದಲ್ಲಿ ಏನೆಲ್ಲಾ ಆಯಿತು ಗೊತ್ತೇ... ಇಲ್ಲಿ ಕ್ಲಿಕ್ ಮಾಡಿ
ಗಲಾಟೆ, ಗದ್ದಲ, ಮಾರ್ಷಲ್‌ಗೇ ಏಟು ಕೊಟ್ಟ ಶಾಸಕರು!
ಸಂಬಂಧಿತ ಮಾಹಿತಿ ಹುಡುಕಿ