ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆಂಟಿ ಕ್ಲೈಮ್ಯಾಕ್ಸ್: ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲ ಶಿಫಾರಸು (Karnataka Crisis | Governor | BJP Government | MLA | Congress | JDS)
Bookmark and Share Feedback Print
 
ರಾಜ್ಯದ ರಾಜಕೀಯ ಹೀನಾಯ ಬಿಕ್ಕಟ್ಟು ಸೋಮವಾರ ಒಂದು ಘಟ್ಟ ತಲುಪಿದ್ದು, ರಾಷ್ಟ್ರೀಯ ವಾಹಿನಿಗಳು ಮಾಡಿರುವ ಆರಂಭಿಕ ವರದಿಗಳ ಪ್ರಕಾರ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ.

ಭಿನ್ನಮತೀಯ ಬಿಜೆಪಿ ಶಾಸಕರು, ಕಾಂಗ್ರೆಸ್, ಜೆಡಿಎಸ್ ಹಾಗೂ ಸ್ವತಂತ್ರ ಶಾಸಕರು ಪೆರೇಡ್ ನಡೆಸಿದಾಗ ರಾಜಭವನದಲ್ಲಿ ಶಾಸಕರ ತಲೆ ಎಣಿಕೆ ನಡೆಸಿ ಸರಕಾರದ ವಿರುದ್ಧ 120 ಶಾಸಕರಿದ್ದಾರೆ ಎಂದು ಕಂಡುಕೊಂಡು ಬಳಿಕ, ರಾಜ್ಯಪಾಲರು ಕೇಂದ್ರಕ್ಕೆ ಈ ವರದಿ ಸಲ್ಲಿಸಿ, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ ಎಂದು ಈ ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿ ಸರಕಾರದ ವಿಶ್ವಾಸಮತ ಯಾಚನೆಯು ಒಂದು ಪ್ರಹಸನವಾಗಿತ್ತು, ಸಾಂವಿಧಾನಿಕವಾಗಿ ಸರಿಯಲ್ಲ. ಸಭಾಧ್ಯಕ್ಷರು ಶಾಸಕರನ್ನು ಅನರ್ಹಗೊಳಿಸಿದ್ದು ಅಸಾಂವಿಧಾನಿಕ ಮತ್ತು ಅನೀತಿಯುಳ್ಳದ್ದು. ಹೀಗಾಗಿ ರಾಷ್ಟ್ರಪತಿ ಆಳ್ವಿಕೆಯೇ ಸೂಕ್ತ ಎಂದು ವರದಿ ಮಾಡಿದ್ದಾರೆ.

ವಿಶ್ವಾಸಮತ ಯಾಚನೆ ವೇಳೆ ಸದಸ್ಯರಲ್ಲದಿದ್ದವರೂ ಸದನದಲ್ಲಿ ಹಾಜರಿದ್ದರು ಎಂದು ಕೇಂದ್ರಕ್ಕೆ ಕಳುಹಿಸಿದ ಶಿಫಾರಸಿನಲ್ಲಿ ರಾಜ್ಯಪಾಲರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಸೇರಿ, ತನ್ನ ನಿರ್ಧಾರ ಪ್ರಕಟಿಸಲಿದೆ. ಕೇಂದ್ರ ಸಂಪುಟವು ಅಸ್ತು ನೀಡಿದರೆ ಮಾತ್ರ ರಾಷ್ಟ್ರಪತಿ ಆಳ್ವಿಕೆ ಹೇರಬಹುದು.

ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಚುನಾಯಿತ ಸರಕಾರವೊಂದರ ಭವಿಷ್ಯವನ್ನು ರಾಜ್ಯಪಾಲರ ಕಚೇರಿ ನಿರ್ಣಯಿಸುವಂತಿಲ್ಲ. ಏನೇ ಇದ್ದರೂ ಅದು ಸದನದಲ್ಲೇ ನಿರ್ಧಾರವಾಗುವುದು. ಅಂದರೆ ರಾಜ್ಯಪಾಲರಿಗೆ ಶಾಸಕರ ತಲೆ ಎಣಿಕೆ ಮಾಡಿ ಸರಕಾರದ ಬಹುಮತ ನಿರ್ಧರಿಸುವ ಹಕ್ಕಿಲ್ಲ.

ಅದೇ ರೀತಿ, ಸ್ಪೀಕರ್ ಅವರು ಸದನದ ಕಲಾಪಗಳ ಕುರಿತು ವರದಿ ಸಲ್ಲಿಸಿ, ಅದನ್ನು ಪರಿಶೀಲಿಸದ ಹೊರತು ರಾಜ್ಯಪಾಲರು ತಮ್ಮ ವರದಿಯನ್ನು ಕೇಂದ್ರಕ್ಕೆ ಕಳುಹಿಸುವಂತಿಲ್ಲ ಎಂಬ ವಾದವೂ ಮತ್ತೊಂದೆಡೆಯಿಂದ ಕೇಳಿಬರುತ್ತಿದೆ.

ರಾಜ್ಯಪಾಲರ ಮೇಲೆ ಈಶ್ವರಪ್ಪ ವಾಗ್ದಾಳಿ
ರಾಜ್ಯಪಾಲರು ವಿರೋಧ ಪಕ್ಷ ನಾಯಕನಂತೆ ವರ್ತಿಸಿದ್ದು, ಜೆಡಿಎಸ್, ಕಾಂಗ್ರೆಸ್‌ಗಳಿಗೆ ಈ ಅನ್ಯಾಯ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ. ಇಂಥ ಕೆಟ್ಟ ರಾಜ್ಯಪಾಲ ರಾಜ್ಯದ ದುರದೃಷ್ಟ. ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಂದ್ರವನ್ನು ಆಗ್ರಹಿಸಿ ಬಿಜೆಪಿಯು ಚಳವಳಿ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಏನೆಲ್ಲಾ ಮಾಡಬಾರದಿತ್ತೋ ರಾಜ್ಯಪಾಲರು ಅದನ್ನೆಲ್ಲಾ ಮಾಡಿದ್ದಾರೆ. ಅವರ ಕ್ರಮಗಳು ಸಂವಿಧಾನವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಎಂದವರು ದೂರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ