ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯಪಾಲ ವಿರುದ್ಧ ರಾಷ್ಟ್ರಪತಿ, ಪ್ರಧಾನಿಗೆ ಬಿಜೆಪಿ ದೂರು, ಪೆರೇಡ್ (Karnataka Crisis | Vote of Confidence | BJP Governmet | Governor)
Bookmark and Share Feedback Print
 
PTI
ಜನರ ವಿಶ್ವಾಸ ಗಳಿಸಿರುವ ಮತ್ತು ವಿಶ್ವಾಸಮತ ಗೆದ್ದಿರುವ ಬಿಜೆಪಿ ಸರಕಾರವನ್ನು ಅತಂತ್ರಗೊಳಿಸುವ ಜೆಡಿಎಸ್ ಮತ್ತು ಕಾಂಗ್ರೆಸ್‌ಗಳಿಗೆ ಕುಮ್ಮಕ್ಕು ನೀಡಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿರುವ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಮಂಗಳವಾರ ದೆಹಲಿಯಲ್ಲಿ ರಾಷ್ಟ್ರಪತಿ ಭವನದೆದುರು ಪ್ರತಿಭಟನೆ ನಡೆಸಲಿದೆ.

ಈ ಕುರಿತು ಸೋಮವಾರ ಸಂಜೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಅನಂತ್ ಕುಮಾರ್, ರಾಜ್ಯಪಾಲರ ಈ ಶಿಫಾರಸಿನ ವಿರುದ್ಧ ಪ್ರಧಾನಮಂತ್ರಿ, ರಾಷ್ಟ್ರಪತಿಗೆ ದೂರು ಸಲ್ಲಿಸಲು ಹಾಗೂ ರಾಷ್ಟ್ರಪತಿಗಳೆದುರು ಬಿಜೆಪಿ ಶಾಸಕರ ಪೆರೇಡ್ ನಡೆಸಲು ಎಲ್ಲರೂ ಮಂಗಳವಾರ ನವದೆಹಲಿಗೆ ತೆರಳಲಿದ್ದಾರೆ ಎಂದರು.

ಯಡಿಯೂರಪ್ಪ ಸರಕಾರವನ್ನು ಮತ್ತು ಪ್ರಜಾತಂತ್ರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ಜೆಡಿಎಸ್, ಕಾಂಗ್ರೆಸ್ ಮತ್ತು ರಾಜ್ಯಪಾಲರಿಂದ ಯತ್ನ ನಡೆಯಿತು ಎಂದು ಅವರು ಆರೋಪಿಸಿದರು.

ಧ್ವನಿಮತದಿಂದ ನಿಶ್ಚಯ ಬಹುಮತ ದೊರಕಿದೆ. ಆಕ್ಷೇಪವಿದ್ದರೆ, ಮತ ವಿಭಜನೆಗೆ ಆಗ್ರಹಿಸುವ ಅವಕಾಶವಿತ್ತು ಎಂದ ಅನಂತ್ ಕುಮಾರ್, 120 ಅಂತ ಸಂಖ್ಯೆಯನ್ನು ರಾಜ್ಯಪಾಲರು ಹೇಳುತ್ತಾ ಇದ್ದರೂ, ಅವರಲ್ಲಿ 16 ಮಂದಿ ಅನರ್ಹ ಶಾಸಕರಿದ್ದಾರೆ. ಅದು ಕೇವಲ 104 ಆಗುತ್ತದೆ. ಹೀಗಾಗಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ನುಡಿದರು.

ಬಿಜೆಪಿಯ 105 ಮಂದಿಯೂ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದ್ದಾರೆ. ಕಾಂಗ್ರೆಸ್, ಜೆಡಿಎಸ್‌ನವರು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕದೆ ನಮ್ಮ ಸಂಖ್ಯೆ 120 ಅಂತ ಹೇಳಿರುವುದು ಹಾಸ್ಯಾಸ್ಪದ ಮತ್ತು ಸಂಪೂರ್ಣ ಸುಳ್ಳು ಎಂದರು.

ಸದನದ ಕಲಾಪಗಳಲ್ಲಿ, ಸಭಾಧ್ಯಕ್ಷರ ನಿರ್ಣಯವೇ ಅಂತಿಮ ಎಂದು ಗೊತ್ತಿದ್ದೂ ಕೂಡ, ಅವರು ಕೂಡ ಸಾಂವಿಧಾನಿಕ ಮುಖ್ಯಸ್ಥ ಎಂದು ಗೊತ್ತಿದ್ದೂ, ಅವರಿಗೇ ಆದೇಶ ನೀಡುವ ಮೂಲಕ ಪ್ರಭಾವ ಬೀರಲು ಯತ್ನಿಸಿದ ರಾಜ್ಯಪಾಲ ಹಂಸರಾಜ ಭಾರದ್ವಾಜರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ನಾವು ರಾಷ್ಟ್ರಪತಿ ಪ್ರತಿಭಾ ಪಾಟೀಲರನ್ನು ಆಗ್ರಹಿಸುತ್ತೇವೆ ಎಂದರು.

ಹೈಕೋರ್ಟ್ ವಿಚಾರಣೆ ಮಂಗಳವಾರ
ಈ ನಡುವೆ, ಶಾಸಕರ ಅನರ್ಹತೆಯನ್ನು ಪ್ರಶ್ನಿಸಿ ಕಾಂಗ್ರೆಸ್, ಜೆಡಿಎಸ್‌ಗಳು ಸೋಮವಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠವು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದ್ದು, ಬಿಜೆಪಿ ಪರವಾಗಿ ನಿವೃತ್ತ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಹಾಗೂ ಬಂಡಾಯ ಶಾಸಕರ ಪರವಾಗಿ ಪಿ.ಪಿ. ರಾವ್ ವಾದಿಸುತ್ತಿದ್ದಾರೆ.

ಕೇಂದ್ರದ ಸಂಪುಟ ನಿರ್ಧಾರವೂ ಮಂಗಳವಾರ
ರಾಜ್ಯಪಾಲರ ಶಿಫಾರಸಿನ ಕುರಿತು ಕೇಂದ್ರ ಸಚಿವ ಸಂಪುಟವು ಮಂಗಳವಾರ ಸಭೆ ಸೇರಿ, ತನ್ನ ನಿರ್ಣಯವನ್ನು ರಾಷ್ಟ್ರಪತಿಯವರಿಗೆ ಕಳುಹಿಸಿಕೊಡಲಿದೆ. ಪ್ರಧಾನಮಂತ್ರಿ ನೇತೃತ್ವದಲ್ಲಿ ಸಂಪುಟ ಸಮಿತಿ ಸಭೆ ನಡೆಯಲಿದ್ದು, ಗೃಹ ಸಚಿವ ಪಿ.ಚಿದಂಬರಂ, ವಿತ್ತ ಸಚಿವ ಪ್ರಣಬ್ ಮುಖರ್ಜಿ ಮುಂತಾದವರು ಭಾಗವಹಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ