ಪಕ್ಷಪಾತಿ ರಾಜ್ಯಪಾಲರನ್ನು ತಕ್ಷಣ ವಾಪಾಸ್ ಕರೆಯಿಸಿಕೊಳ್ಳಿ: ಬಿಜೆಪಿ
ನವದೆಹಲಿ, ಮಂಗಳವಾರ, 12 ಅಕ್ಟೋಬರ್ 2010( 09:27 IST )
ಪಕ್ಷಪಾತಿ ಧೋರಣೆ ಹೊಂದಿರುವ ರಾಜ್ಯ ರಾಜ್ಯಪಾಲರನ್ನು ತಕ್ಷಣವೇ ವಾಪಾಸ್ ಕರೆಯಿಸಿಕೊಳ್ಳುವಂತೆ ಬಿಜೆಪಿ ಪಕ್ಷ ಆಗ್ರಹಿಸಿದೆ. ವಿಶ್ವಾಸಮತ ಗೆದ್ದಿರುವ ಹೊರತಾಗಿಯೂ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿರುವ ರಾಜ್ಯಪಾಲರ ಕ್ರಮದ ವಿರುದ್ಧ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ ದಿನಗಳಲ್ಲಿ ಉಂಟಾಗಿರುವ ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಕಾರ್ಯದರ್ಶಿ ರವಿಶಂಕರ್ ಪ್ರಸಾದ್, ರಾಜ್ಯಪಾಲರು ಕಾಂಗ್ರೆಸ್ ಏಜೆಂಟ್ ಆಗಿ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ರಾಜ್ಯಪಾಲರಿಂದ ಪ್ರಜಾತಂತ್ರದ ಕಗ್ಗೊಲೆಯಾಗುತ್ತಿದ್ದು, ರಾಜಭನವನ್ನು ಕಾಂಗ್ರೆಸ್ ಕಚೇರಿಯನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ರಾಜ್ಯಪಾಲರನ್ನು ತಕ್ಷಣ ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದವರು ಹೇಳಿದರು.
ಅದೇ ಹೊತ್ತಿಗೆ ರಾಜ್ಯ ಸಿಎಂ ಬಿ. ಎಸ್ ಯಡಿಯೂರಪ್ಪ ನೇತೃತ್ವದ ಶಾಸಕರ ದಂಡು ಇಂದು ಬೆಳಿಗ್ಗೆ ರಾಷ್ಟ್ರ ರಾಜಧಾನಿಗೆ ಪಯಣ ಬೆಳೆಸಿದೆ. ಅಲ್ಲಿ ಅವರು ರಾಷ್ಟ್ರಪತಿ, ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದು, ಮುಖ್ಯಮಂತ್ರಿ ನಿಯೋಗವು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮನವರಿಕೆ ಮಾಡಲಿದ್ದಾರೆ.
ರಾಷ್ಟ್ರಪತಿ ಎದುರುಗಡೆ ಯಡ್ಡಿ ಸರಕಾರವು ತಮ್ಮ ಬಲವನ್ನು ಪ್ರದರ್ಶಿಸಲಿದೆ. ರಾಜ್ಯಪಾಲರು ಕೈಗೊಂಡಿರುವ ಕ್ರಮವು ಸಂವಿಧಾನ ಬಾಹಿರವಾಗಿದೆ. ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡುವ ಮೂಲಕ ರಾಜ್ಯಪಾಲ ಕಾಂಗ್ರೆಸ್ ಏಜೆಂಟ್‌ರಂತೆ ವರ್ತಿಸುತ್ತಿದ್ದು, ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಲಿದ್ದಾರೆ.