ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸರಕಾರ ಉಳಿಸಲು ಸರ್ಕಸ್, ಬಿಜೆಪಿ ದಂಡು ದೆಹಲಿಗೆ (BJP, Karnataka Government, Karnataka Crisis, Yaddyurappa, Parade, Governor, President, Hansraj Bharadwaj)
ಕಾಂಗ್ರೆಸ್ ಏಜೆಂಟರಂತೆ ವರ್ತಿಸಿ, ಚುನಾಯಿತ ಸರಕಾರ ಅಸ್ಥಿರಗೊಳಿಸುವ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆ ಕೈಜೋಡಿಸಿ ರಾಜಕೀಯ ಮಾಡುತ್ತಿರುವ ಮತ್ತು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ರನ್ನು ವಾಪಸ್ ಕರೆಸಿಕೊಳ್ಳಲು ಆಗ್ರಹಿಸಿ ಕರ್ನಾಟಕದ ಬಿಜೆಪಿ ಶಾಸಕರು ದೆಹಲಿಗೆ ತೆರಳಿದ್ದು, ಸಂಜೆ ರಾಷ್ಟ್ರಪತಿಯವರನ್ನು ಭೇಟಿಯಾಗಿ ದೂರು ನೀಡಲಿದ್ದಾರೆ.
ಅದರ ನಡುವೆ, ವಿಶ್ವಾಸಮತ ಗೆದ್ದರೂ ರಾಷ್ಟ್ರಪತಿ ಶಾಸನಕ್ಕೆ ಶಿಫಾರಸು ಮಾಡಿರುವ ಮತ್ತು ಪದೇ ಪದೇ ಬಿಜೆಪಿ ಸರಕಾರಕ್ಕೆ ಅಸಹಕಾರ ತೋರುತ್ತಿರುವ ರಾಜ್ಯಪಾಲರ ವಿರುದ್ಧ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೂ ಬಿಜೆಪಿ ಶಾಸಕರು ದೂರನ್ನು ಸಲ್ಲಿಸಲಿದ್ದಾರೆ.
105 ಶಾಸಕರು ಹಾಗೂ 19 ಲೋಕಸಭಾ ಸದಸ್ಯರ ನಿಯೋಗದ ನೇತೃತ್ವವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಹಿಸಿದ್ದು, ವರಿಷ್ಠ ನಾಯಕ ಎಲ್.ಕೆ.ಆಡ್ವಾಣಿ ಅವರ ನಿವಾಸದಲ್ಲಿ ಬಿಜೆಪಿಯ ಪ್ರಮುಖ ನಾಯಕರ ಸಭೆ ನಡೆಯಲಿದೆ.
ಇತಿಹಾಸ ಮರುಕಳಿಸಿದೆ... ತಮ್ಮ ಬಲಾಬಲ ಪ್ರದರ್ಶನಕ್ಕೆ ರಾಷ್ಟ್ರಪತಿ ಎದುರು ಪೆರೇಡ್ ನಡೆಸಲೂ ಬಿಜೆಪಿ ನಿರ್ಧರಿಸಿದೆ. ಆದರೆ 2007ರಲ್ಲಿಯೂ ಯಡಿಯೂರಪ್ಪ ಅವರು ರಾಷ್ಟ್ರಪತಿ ಎದುರು ಶಾಸಕರ ಪೆರೇಡ್ ನಡೆಸಿದ್ದು ನೆನಪಿರಬಹುದು. ಅಂದಿನ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್ ಅವರ ವಿರುದ್ಧ ದೂರು ನೀಡಿ, ಬಿಜೆಪಿ-ಜೆಡಿಎಸ್ ಸರಕಾರ ಸ್ಥಾಪನೆಗೆ ಅವಕಾಶ ಮಾಡಿಕೊಡುವಂತೆ ಇದೇ ಯಡಿಯೂರಪ್ಪ ಅಂದು ಮನವಿ ಮಾಡಿದ್ದರು.
ಆದರೆ, ಆ ಬಳಿಕ, ಜೆಡಿಎಸ್ ಕೈಕೊಟ್ಟು, ವಿಶ್ವಾಸಮತದ ಚರ್ಚೆ ವೇಳೆ ಬಹುಮತ ಸಾಬೀತುಪಡಿಸಲು ವಿಫಲವಾದಾಗ ಯಡಿಯೂರಪ್ಪ ಅವರು ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ.