ಮತ್ತೆ ವಿಶ್ವಾಸ ಮತ ಯಾಚಿಸಬೇಕು ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಸೂಚನೆ ನೀಡಿರುವುದು ಅಚ್ಚರಿ ತಂದಿದೆ ಎಂದು ಹೇಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚಿಸಿದ ನಂತರ ಕಾನೂನು ಹೋರಾಟಗಳ ಬಗ್ಗೆ ಚಿಂತನೆ ಮಾಡಲಾಗುತ್ತದೆ ಎಂದಿದ್ದಾರೆ.
ಅಕ್ಟೋಬರ್ 14ರಂದು ಬೆಳಿಗ್ಗೆ 11 ಗಂಟೆಗೆ ಮತ್ತೆ ವಿಶ್ವಾಸ ಮತವನ್ನು ಯಾಚಿಸುವಂತೆ ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಈಗಷ್ಟೇ ನನಗೆ ತಲುಪಿದೆ. ರಾಜ್ಯಪಾಲರ ನಿರ್ಧಾರ ನನಗೆ ತೀವ್ರ ಅಚ್ಚರಿ ತಂದಿದೆ. ಈಗಾಗಲೇ ನಾವು ಬಹುಮತ ಸಾಬೀತುಪಡಿಸಿದ್ದೇವೆ. ನಿನ್ನೆಯಷ್ಟೇ ಸರಕಾರ ಸುಭದ್ರವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದೆವು ಎಂದು ಪ್ರತಿಕ್ರಿಯೆ ನೀಡಿದರು.
ನಾವು ಬಹುಮತ ಸಾಬೀತುಪಡಿಸಿದ ನಂತರ ಅದನ್ನು ಒಪ್ಪಿಕೊಳ್ಳದ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಈಗ ತಮ್ಮ ನಿಲುವನ್ನು ರಾಜ್ಯಪಾಲರು ಮತ್ತೆ ಬದಲಾಯಿಸಿದ್ದಾರೆ. ಮತ್ತೆ ಬಹುಮತ ಸಾಬೀತು ಪಡಿಸಬೇಕು, ವಿಶ್ವಾಸ ಮತ ಯಾಚಿಸಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರು ಮತ್ತು ಕಾನೂನು ತಜ್ಞರ ಜತೆ ಚರ್ಚೆ ನಡೆಸಿದ ನಂತರ ಮುಂದಿನ ನಿರ್ಧಾರಕ್ಕೆ ಬರಲಾಗುತ್ತದೆ ಎಂದರು.
ಅದೇ ಹೊತ್ತಿಗೆ ರಾಜ್ಯಪಾಲರ ವರ್ತನೆಗೆ ರಾಜ್ಯದ ಜನತೆ ಶಾಂತ ರೀತಿಯಿಂದ ವರ್ತಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿಕೊಂಡರು.
ತಾವು ಯಾವತ್ತೂ ಸಿದ್ಧರಿದ್ದೇವೆ: ಧನಂಜಯ್ ನಾವು 11ಕ್ಕೆ ಬಹುಮತ ಸಾಬೀತು ಪಡಿಸಿದ್ದೇವೆ, 14ಕ್ಕೂ ಸಿದ್ಧ, ಮತ್ತೆ ಮುಂದಿನ ಯಾವುದೇ ದಿನವೂ ನಾವು ಬಹುಮತ ಸಾಬೀತು ಪಡಿಸಲು ಸಿದ್ಧರಿದ್ದೇವೆ ಎಂದು ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಧನಂಜಯ್ ಕುಮಾರ್ ತಿಳಿಸಿದ್ದಾರೆ.
ಬಿಜೆಪಿ ಸರಕಾರವು ತನಗೆ ಬಹುಮತ ಇದೆ ಎಂಬುದನ್ನು ನಿನ್ನೆಯೇ ವಿಶ್ವಾಸ ಮತ ಯಾಚಿಸಿ ತೋರಿಸಿದೆ. ಆದರೆ ಘನತೆವೆತ್ತ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದರು. ಮತ್ತೆ ತನ್ನ ನಿಲುವನ್ನು ಒಂದೇ ದಿನದಲ್ಲಿ ಬದಲಾಯಿಸಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಪರಂಪರೆಗೆ ರಾಜ್ಯಪಾಲರು ನಾಂದಿ ಹಾಡಿದ್ದಾರೆ ಎಂದು ಧನಂಜಯ್ ಅಭಿಪ್ರಾಯಪಟ್ಟರು.
ನಮಗೆ ಯಾವುದೇ ಸಮಸ್ಯೆಯಿಲ್ಲ. ನಾವು ನಿನ್ನೆಯೇ ಬಹುಮತ ಸಾಬೀತು ಪಡಿಸಿದ್ದೇವೆ. ಇದು 14ರಂದು ಕೂಡ ಇರುತ್ತದೆ. ಇದು ಕರ್ನಾಟಕದ ಜನತೆಗೆ ಸಿಕ್ಕ ಜಯ. ಆದರೆ ರಾಜ್ಯಪಾಲರು ನಿಜವಾಗಿಯೂ ಸಾರ್ವಜನಿಕ ಜೀವನದಲ್ಲಿ ಘನತೆ, ಗೌರವ ಎಂಬುದಕ್ಕೆ ಬೆಲೆ ಕೊಡುವ ವ್ಯಕ್ತಿಯಾಗಿದ್ದರೆ, ಅವರು ತನ್ನ ಸ್ಥಾನವನ್ನು ತೊರೆಯಲಿ ಎಂದು ಬಿಜೆಪಿ ಹಿರಿಯ ನಾಯಕ ಹೇಳಿದರು.
ನಿನ್ನೆ ಸರಕಾರವು ಬಹುಮತ ಸಾಬೀತುಪಡಿಸಿದ್ದನ್ನು ರಾಜ್ಯಪಾಲರು ಕೇಂದ್ರಕ್ಕೆ ತನ್ನ ವರದಿಯಲ್ಲಿ ತಿಳಿಸಬೇಕಿತ್ತು. ಆದರೆ ಅವರು ವಿಧಾನಸಭೆಯನ್ನು ವಿಸರ್ಜನೆ ಮಾಡಿ ಎಂದು ವರದಿ ಮಾಡಿದ್ದರೆ. ಈಗ ಕೇವಲ 24 ಗಂಟೆಗಳ ಒಳಗೆ ತನ್ನ ನಿಲುವನ್ನು ಬದಲಾವಣೆ ಮಾಡಿದ್ದಾರೆ. ಇದರ ಹಿಂದಿನ ರಹಸ್ಯ ಏನು ಎಂಬುದನ್ನು ನಾವು ಪ್ರಶ್ನೆ ಮಾಡುವ ಸಮಯ ಬಂದಿದೆ ಎಂದರು.