ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅ.14ರಂದು ವಿಧಾನಸಭೆಯಲ್ಲಿ ಮತ್ತೆ ವಿಶ್ವಾಸಮತ ಕೋರಲಿರುವ ಹಿನ್ನೆಲೆಯಲ್ಲಿ ಅನರ್ಹಗೊಂಡಿರುವ ಐವರು ಪಕ್ಷೇತರ ಶಾಸಕರು ಪ್ರಕರಣದ ಕುರಿತು ಇಂದೇ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಕೋರಿ ಹೈಕೋರ್ಟ್‌ಗೆ ಮೂರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.
ಪಕ್ಷೇತರ ಶಾಸಕರ ಅನರ್ಹ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಅ.18ಕ್ಕೆ ಮುಂದೂಡಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅ.14ರಂದು ಮತ್ತೆ ವಿಶ್ವಾಸಮತ ಸಾಬೀತುಪಡಿಸುವಂತೆ ಕೋರಿ ಪತ್ರ ರವಾನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅನರ್ಹಗೊಂಡ ಐವರು ಪಕ್ಷೇತರ ಶಾಸಕರು ಪ್ರಕರಣದ ತುರ್ತು ವಿಚಾರಣೆ ನಡೆಸಿ ಬುಧವಾರವೇ ತೀರ್ಪು ನೀಡಬೇಕು. ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ತಮಗೂ ಮತ ಚಲಾಯಿಸಲು ಅವಕಾಶವಾಗುವಂತೆ ಅನುಕೂಲ ಮಾಡಿಕೊಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬುಧವಾರ ಪಕ್ಷೇತರ ಶಾಸಕರು ಅರ್ಜಿಯ ಲೋಪದೋಷ ತಿದ್ದುಪಡಿ, ಮೂಲ ಅರ್ಜಿಯ ಲೋಪದೋಷ. ಸ್ಪೀಕರ್ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯರಾಜಕಾರಣದಲ್ಲಿನ ಹೈ ಡ್ರಾಮಾ ಮುಂದುವರಿದಿದ್ದು, ನಾಳೆ ಯಡಿಯೂರಪ್ಪ ಅವರಿಗೆ ಎರಡನೇ ಬಾರಿ ಅಗ್ನಿ ಪರೀಕ್ಷೆ ಎದುರಾದಂತಾಗಿದೆ. ಏತನ್ಮಧ್ಯೆ ಪಕ್ಷೇತರ ಶಾಸಕರು ಅನರ್ಹ ಪ್ರಕರಣದ ಕುರಿತಂತೆ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಐವರು ಪಕ್ಷೇತರರ ಅನರ್ಹ ಪ್ರಕರಣದ ಅರ್ಜಿಯ ಪ್ರತಿಯನ್ನು ಮುಖ್ಯಮಂತ್ರಿ ಪರ ವಕೀಲರಿಗೆ ರವಾನೆ ಮಾಡಲಾಗಿದೆ.
ಪಕ್ಷೇತರ ಶಾಸಕರು ಸಲ್ಲಿಸಿರುವ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿ ಇಂದೇ ತೀರ್ಪು ನೀಡಿ, ಅದು ಪಕ್ಷೇತರರ ಪರವಾಗಿ ಬಂದಲ್ಲಿ ಆಡಳಿತಾರೂಢ ಬಿಜೆಪಿ ಸರಕಾರ ಮತ್ತೆ ಇಕ್ಕಟ್ಟಿಗೆ ಸಿಲುಕಿದಂತಾಗಲಿದೆ. ಹಾಗಾಗಿ ಮುಂದಿನ ರಾಜಕೀಯ ನಡೆಯ ಕುರಿತು ಬಿಜೆಪಿ ತುರ್ತು ಸಭೆ ನಡೆಸಿ ವ್ಯವಸ್ಥಿತ ಯೋಜನೆಯನ್ನು ರೂಪಿಸುತ್ತಿದೆ.