ರಾಜ್ಯರಾಜಕಾರಣದಲ್ಲಿನ ಜಂಗೀಕುಸ್ತಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಏಕಾಏಕಿ ಉಲ್ಟಾ ಹೊಡೆದು ಎರಡನೇ ಬಾರಿಗೆ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿರುವ ತಂತ್ರದ ಹಿಂದೆ ಕಾಂಗ್ರೆಸ್‌ನ ಇಬ್ಬರು ಪ್ರಭಾವಿ ನಾಯಕರೇ ಕಾರಣ ಎನ್ನಲಾಗಿದೆ!
ಆಡಳಿತಾರೂಢ ಬಿಜೆಪಿ ಸರಕಾರವನ್ನು ಉರುಳಿಸಲೇಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ವ್ಯವಸ್ಥಿತ ತಂತ್ರಗಾರಿಕೆ ನಡೆಸಿ ದಾಳ ಉರುಳಿಸಿತ್ತು. ಆದರೆ ಈ ಬೆಳವಣಿಗೆ ಕಾಂಗ್ರೆಸ್‌ನಲ್ಲಿನ ಕೆಲವು ಮುಖಂಡರಿಗೆ ಅತೃಪ್ತಿ ಮೂಡಿಸಿತ್ತು. ರಾಜಕೀಯ ಹಗ್ಗಜಗ್ಗಾಟದಲ್ಲಿ ತಮಗೆ ಜಯ ಎಂದು ಲೆಕ್ಕಚಾರ ಹಾಕಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಇದೀಗ ಮುಖಭಂಗಕ್ಕೆ ಈಡಾಗಿವೆ.
ಆರಂಭದಿಂದಲೂ ಕಾಂಗ್ರೆಸ್ ಪರವಾಗಿಯೇ ರಾಜ್ಯಪಾಲರು ಕಾರ್ಯನಿರ್ವಹಿಸಿತ್ತಾರೆಂಬುದು ನಗ್ನಸತ್ಯ. ಆದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ರಾಜ್ಯಪಾಲರು ಶಿಫಾರಸು ಮಾಡಿದ್ದು, ತದನಂತರ ಉಲ್ಟಾ ಹೊಡೆದಿರುವ ಷಡ್ಯಂತ್ರದ ಹಿಂದೆ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹಾಗೂ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಪ್ರಮುಖರು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಬಿ.ಕೆ. ಸ್ಪರ್ಧೆಗೆ ಜೆಡಿಎಸ್ ಅಡ್ಡಗಾಲು ಹಾಕಿತ್ತು. ಆ ಸೇಡನ್ನು ಬಿ.ಕೆ. ಈ ಸಂದರ್ಭದಲ್ಲಿ ತೀರಿಸಿಕೊಂಡಿದ್ದಾರೆ. ಅಲ್ಲದೇ ಸೋಮವಾರ ಬೆಂಗಳೂರಿನಲ್ಲಿದ್ದ ವೀರಪ್ಪ ಮೊಯ್ಲಿ ಅವರನ್ನು ರಾತ್ರಿಯ ವೇಳೆಗೆ ತುರ್ತಾಗಿ ದೆಹಲಿಗೆ ಕರೆಯಿಸಿಕೊಂಡು ಹೈಕಮಾಂಡ್ ಅಭಿಪ್ರಾಯ ಪಡೆದಿತ್ತು.
ಒಂದು ವೇಳೆ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕೈಜೋಡಿಸಿ ಸರಕಾರ ರಚನೆಯಾದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸುತ್ತಾರೆ. ಈ ರೀತಿ ಹಿಂದುಳಿದ ವರ್ಗದ ಸಿದ್ದು ಅಧಿಕಾರದ ಗದ್ದುಗೆಗೆ ಏರಿದರೆ ತಮ್ಮ ವರ್ಚಸ್ಸಿಗೆ ಧಕ್ಕೆ ಎಂದು ತಿಳಿದು ಮೊಯ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಆಡಳಿತಕ್ಕೆ ಅಡ್ಡಗಾಲು ಹಾಕಿ, ರಾಜ್ಯಪಾಲರು ಮತ್ತೊಮ್ಮೆ ಬಿಜೆಪಿಗೆ ಬಹುಮತ ಸಾಬೀತು ಪಡಿಸುವಂತೆ ಹೈಕಮಾಂಡ್‌ನಿಂದಲೇ ಸಂದೇಶ ರವಾನಿಸಿದ್ದಾರೆನ್ನಲಾಗಿದೆ!
ಅಂತೂ ಕಾಂಗ್ರೆಸ್ ಮುಖಂಡರ ಹಗ್ಗಜಗ್ಗಾಟದಲ್ಲಿ ಬಿಜೆಪಿ ಸರಕಾರವನ್ನು ಉರುಳಿಸಬೇಕೆಂಬ ಸಂಚು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮುಖಭಂಗ ಅನುಭವಿಸುವಂತಾಗಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಕನಸು ಭಗ್ನಗೊಂಡಂತಾಗಿದೆ.