ಬಿಜೆಪಿಯ ಒತ್ತಡಕ್ಕೆ ಮಣಿದು ಸ್ಪೀಕರ್ ಬೋಪಯ್ಯ ಅವರು ಭಿನ್ನಮತೀಯ ಶಾಸಕರ ಶಾಸಕತ್ವವನ್ನು ಅನರ್ಹಗೊಳಿಸಿದ್ದು, ಹೈ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತದೆ ಎಂದು ಶಾಸಕ ವೈ.ಸಂಪಂಗಿ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರಕಾರಕ್ಕೆ ಬೆಂಬಲ ವಾಪಸ್ ಪಡೆಯುವ ಬಗ್ಗೆ ರಾಜ್ಯಪಾಲರಿಗೆ ನಾವು ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ನೀಡಿದ್ದ ನೋಟಿಸ್‌ಗೆ ಉತ್ತರಿಸಲು ಸೂಕ್ತ ಕಾಲಾವಕಾಶ ನೀಡಲಿಲ್ಲ. ಪಕ್ಷದಿಂದ ವಿಪ್ ನೀಡಿದ ಮೇಲೆ ವಿಶ್ವಾಸಮತ ಯಾಚನೆಗೆ ಸಭೆ ನಡೆಸಬೇಕು. ಸೋಲು- ಗೆಲುವು ನಂತರದ ಪ್ರಶ್ನೆ. ಆದರೆ ಏಕಾಏಕಿ ಭಿನ್ನಮತೀಯ ಶಾಸಕರು ಹಾಗೂ ಪಕ್ಷೇತರರ ಶಾಸಕತ್ವವನ್ನು ಅನರ್ಹಗೊಳಿಸಿರುವ ಸ್ಪೀಕರ್ ಹೊರಡಿಸಿರುವ ಕ್ರಮ ಕಾನೂನು ಬಾಹಿರ. ಇದರ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ನ್ಯಾಯ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಇಂದು ನಡೆದ ರಾಜಕೀಯ ವಿದ್ಯಮಾನಗಳ ಕುರಿತು ಕಾಂಗ್ರೆಸ್- ಜೆಡಿಎಸ್ ಹಾಗೂ ಭಿನ್ನಮತೀಯ ಶಾಸಕರು, ಪಕ್ಷೇತರರು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಪ್ರಸ್ತುತ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಶಾಸಕತ್ವ ಅನರ್ಹತೆ ರದ್ದುಗೊಂಡು ಮತ್ತೆ ಮತ್ತೆ ಶಾಸಕನಾಗಿ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.