ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪಕ್ಷೇತರರಿಗೆ ಅವಕಾಶವಿಲ್ಲ; ಹೈಕೋರ್ಟ್ ತೀರ್ಪು ಅಂತಿಮ (High court | Yeddyurappa | BJP | Congress | JDS)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಎರಡನೇ ಬಾರಿಯ ವಿಶ್ವಾಸ ಮತ ಯಾಚನೆ ಮತ್ತೊಂದು ತಿರುವು ಪಡೆದುಕೊಂಡಿದ್ದು, ಗುರುವಾರ ನಡೆಯಲಿರುವ ವಿಶ್ವಾಸ ಮತ ಯಾಚನೆ ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಪಕ್ಷೇತರ ಶಾಸಕರು ಸಲ್ಲಿಸಿದ ಅನರ್ಹತೆ ಪ್ರಕರಣದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮಹತ್ವದ ಆದೇಶ ನೀಡಿದೆ.

ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸಮತ ಯಾಚಿಸುತ್ತಿರುವ ಹಿನ್ನೆಲೆಯಲ್ಲಿ ತಮಗೂ ಮತದಾನ ಮಾಡಲು ಅವಕಾಶವಾಗುವಂತೆ ಕೋರಿ ಹೈಕೋರ್ಟ್‌ಗೆ ಇಂದು ಪಕ್ಷೇತರ ಶಾಸಕರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ವಿಶೇಷ ಮನವಿ ಮೇರೆಗೆ ಹೈಕೋರ್ಟ್ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಕೇಹರ್ ಅವರು ಐವರು ಪಕ್ಷೇತರ ಶಾಸಕರು ಸಲ್ಲಿಸಿದ ಮೂರು ಪ್ರತ್ಯೇಕ ಅರ್ಜಿಯ ವಿಚಾರಣೆ ನಡೆಸಿ, ಅ.14ರಂದು ನಡೆಯಲಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಐವರು ಪಕ್ಷೇತರ ಶಾಸಕರು ಮತ ಚಲಾಯಿಸುವಂತಿಲ್ಲ ಎಂದು ಸೂಚಿಸಿದರು.

ಆದರೆ ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಕ್ರಿಯೆ ನಡೆದರೂ ಕೂಡ ಅದು ಹೈಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆದೇಶ ನೀಡಿದರು.

ಅನರ್ಹಗೊಂಡ ಪಕ್ಷೇತರ ಬೇಡಿಕೆ ತಿರಸ್ಕಾರ: ಗುರುವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ತಮಗೆ ಮತ ನೀಡಲು ಅವಕಾಶ ನೀಡುವಂತೆ ಕೋರಿ ಪಕ್ಷೇತರ ಶಾಸಕರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಆ ನಿಟ್ಟಿನಲ್ಲಿ ಪಕ್ಷೇತರರ ಶಾಸಕರು ನಾಳೆಯ ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸುವಂತಿಲ್ಲ.

ನಾಳಿನ ಗೆಲುವು ಗೆಲುವಲ್ಲ-ದತ್ತಾ: ನಾಳೆ ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸಮತದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗೆಲುವು ಗೆಲುವಾಗಲಾರದು, ಯಾಕೆಂದರೆ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ನೀಡಿದ ನಂತರ ಅದರ ಆಧಾರದ ಮೇಲೆ ಬಹುಮತವನ್ನು ಲೆಕ್ಕ ಹಾಕಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಗುರುವಾರದ ಗೆಲುವು ಅಂತಿಮ ಗೆಲುವಲ್ಲ. ಹೈಕೋರ್ಟ್ ಅ.18ರಂದು ನೀಡುವ ತೀರ್ಪಿನ ಆಧಾರದ ಮೇಲೆ ಸರಕಾರದ ಹಣೆಬರಹ ನಿರ್ಧಾರವಾಗಲಿದೆ.

ಫಲಿತಾಂಶ ಪ್ರಕಟಣೆ ತಡೆ ಸಾಧ್ಯವಿಲ್ಲ: ಗುರುವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಫಲಿತಾಂಶ ಪ್ರಕಟಣೆಯನ್ನು ತಡೆಯಲು ಸಾಧ್ಯವಿಲ್ಲ. ಸ್ಪೀಕರ್ ಅವರು ಫಲಿತಾಂಶವನ್ನು ಘೋಷಿಸುತ್ತಾರೆ ಎಂದು ಕಾನೂನು ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೊಮ್ಮೆ ವಿಶ್ವಾಸಮತ ಸಾಧ್ಯತೆ?: ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠ ಅ.18ರಂದು ಪಕ್ಷೇತರ ಶಾಸಕರ ಅರ್ಹತೆ ಊರ್ಜಿತವಲ್ಲ ಎಂದು ತೀರ್ಪು ನೀಡಿದರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಬಹುಮತ ಸಾಬೀತುಪಡಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಐವರು ಪಕ್ಷೇತರ ಸದಸ್ಯರು ಮತ ಚಲಾಯಿಸುವ ಹಕ್ಕು ಪಡೆಯುತ್ತಾರೆ. ಒಂದು ವೇಳೆ ಪಕ್ಷೇತರ ಶಾಸಕರ ಅರ್ಹತೆ ಸಮಂಜಸ ಅಂತ ಕೋರ್ಟ್ ಅಂತಿಮ ತೀರ್ಪು ನೀಡಿದಲ್ಲಿ, ಮತ್ತೆ ವಿಶ್ವಾಸ ಮತ ಯಾಚಿಸುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಪರ ವಕೀಲರಾದ ನರಗುಂದ್ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ