ಗುರುವಾರದ ವಿಶ್ವಾಸಮತಕ್ಕೆ ಮುನ್ನಾದಿನ ನಡೆದ ಬಿರುಸಿನ ರಾಜಕೀಯ ಚಟುವಟಿಕೆಗಳಲ್ಲಿ, ಮುಂದಿನ ಕಾರ್ಯತಂತ್ರ ಕುರಿತು ಚರ್ಚಿಸಲೆಂದು ಕಾಂಗ್ರೆಸ್ ನಡೆಸಿದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತವಾಗಿ, ಕೆಲವು ಶಾಸಕರು ರಾಜೀನಾಮೆ ನೀಡುವುದಾಗಿ ಹೇಳುವವರೆಗೂ ಹೋಯಿತು ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಎರಡನೇ ಬಾರಿ ವಿಶ್ವಾಸ ಮತ ಕೋರುವಂತೆ, ದಿಢೀರ್ ಆಗಿ ಅ.14ರ ದಿನಾಂಕವನ್ನೂ ನಿರ್ಧರಿಸಿ ರಾಜ್ಯದ ಬಿಜೆಪಿ ಸರಕಾರಕ್ಕೆ ಸೂಚಿಸಿರುವುದು ಕಾಂಗ್ರೆಸ್ ಶಾಸಕರ ಅಸಮಾಧಾನಕ್ಕೆ ಕಾರಣಗಳಲ್ಲೊಂದು.
ಅದೇ ರೀತಿ, ಬಿಜೆಪಿ ವಿರುದ್ಧದ ತಂತ್ರ-ಪ್ರತಿತಂತ್ರದಲ್ಲಿ ತಮಗೆ ಹೈಕಮಾಂಡ್ ಸೂಕ್ತ ಸಹಕಾರ ನೀಡದೆ, ತಮ್ಮನ್ನು ಯಾರನ್ನೂ ಒಂದು ಮಾತು ಕೇಳದೆ ಮುಂದಿನ ನಡೆಯನ್ನು ನಿರ್ಧರಿಸಿತು. ರಾಜ್ಯಪಾಲರು ಇದನ್ನು ಘೋಷಿಸಿಯೇ ಬಿಟ್ಟರು ಎಂಬುದು ಅವರ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದ ಅಂಶ.
ಹಲವು ಶಾಸಕರು ಈ ಕುರಿತು ಆಕ್ಷೇಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಪ್ರತಿಪಕ್ಷ ನೇತಾರ ಸಿದ್ದರಾಮಯ್ಯ ಅವರು, ಅಂಥದ್ದೇನೂ ನಡೆದಿಲ್ಲ, ಇದೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ಸಾರಾಸಗಟಾಗಿ ತಳ್ಳಿ ಹಾಕಿದರು.
ರಾಜ್ಯಪಾಲರ ಕ್ರಮ ತಪ್ಪು, ಬೆಳಿಗ್ಗೆ ಅಂತಿಮ ತೀರ್ಮಾನ ಎಂದ ಸಿದ್ದು ಇದಕ್ಕೆ ಮೊದಲು ಪ್ರತಿಕ್ರಿಯೆ ನೀಡುತ್ತಿದ್ದ ಸಿದ್ದರಾಮಯ್ಯ, 2ನೇ ಬಾರಿ ವಿಶ್ವಾಸಮತ ಸಾಬೀತುಪಡಿಸಲು ರಾಜ್ಯಪಾಲರು ಕೇಳಿಕೊಂಡದ್ದು ಸರಿಯಲ್ಲ, ಇದೊಂದು ಇತಿಹಾಸದಲ್ಲೇ ಅಭೂತಪೂರ್ವ ಮತ್ತು ಅಸಾಂವಿಧಾನಿಕ ಕ್ರಮ. 16 ಶಾಸಕರ ಅನರ್ಹತೆ ವಿಚಾರವು ಹೈಕೋರ್ಟಿನಲ್ಲಿ ಇದ್ದರೂ ಗುರುವಾರವೇ ವಿಶೇಷ ಅಧಿವೇಶನ ಕರೆಯಲಾಗಿದೆ. ನಾವು ಈ ಅಧಿವೇಶನವನ್ನೇ ಬಹಿಷ್ಕರಿಸುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದಿದ್ದಾರೆ ಸಿದ್ದರಾಮಯ್ಯ.
ರಾಜ್ಯಪಾಲರು ಈ ವಿಶೇಷ ಅಧಿವೇಶನ ಮುಂದೂಡಬೇಕು ಎಂದು ಪಕ್ಷದ ಹೆಚ್ಚಿನ ಶಾಸಕರು ಅಭಿಪ್ರಾಯಪಡುತ್ತಿದ್ದಾರೆ. ಇದು ಸಾಧ್ಯವಾಗದಿದ್ದರೆ ನಾವು ಅಧಿವೇಶನ ಬಹಿಷ್ಕರಿಸುವ ಬಗ್ಗೆ ಯೋಚಿಸಬೇಕಾಗುತ್ತದೆ ಎಂದಿದ್ದಾರೆ ಸಿದ್ದು. ಶುಕ್ರವಾರ ಬೆಳಿಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ ಸಿದ್ದರಾಮಯ್ಯ.
ಇದೇ ಸಂದರ್ಭ, ಜೆಡಿಎಸ್ ನಾಯಕ ಕುಮಾರಸ್ವಾಮಿ ಕೂಡ ಇದೇ ಮಾತು ಹೇಳಿದ್ದು, ಅವರ ಪಕ್ಷದ ಶಾಸಕರು ಕೂಡ ವಿಶ್ವಾಸಮತ ಬಹಿಷ್ಕರಿಸುವ ಕುರಿತು ಯೋಚಿಸುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ.