ಪ್ರಾಚೀನವಾದ ಪ್ರಾಕೃತ ಭಾಷೆ ಬಗ್ಗೆ ಆಳವಾದ ಅಧ್ಯಯನ ನಡೆಯುವ ಅಗತ್ಯ ಇದ್ದು, ಇದಕ್ಕೆ ಸರಕಾರ ಒತ್ತು ನೀಡಬೇಕು ಎಂದು ದೆಹಲಿ ಸಂಸ್ಕೃತ ವಿವಿ ಉಪ ಕುಲಪತಿ ಪ್ರೊ.ಆರ್.ವಿ.ತ್ರಿಪಾಠಿ ಹೇಳಿದ್ದಾರೆ.
ಶ್ರವಣಬೆಳಗೊಳದಲ್ಲಿ ಅಂತಾರಾಷ್ಟ್ರೀಯ ಪ್ರಾಕೃತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಯಾವುದೇ ಭಾಷೆ ಬಗ್ಗೆ ತಿರಸ್ಕಾರ, ಉದಾಸೀನ ಮನೋಭಾವನೆ ಸಲ್ಲದು ಎಂದರು.
ಪ್ರಾಕೃತ ಭಾಷೆಯಲ್ಲಿ ಸಾವಿರಾರು ಗ್ರಂಥಗಳಿವೆ. ಅಧ್ಯಯನದ ಮೂಲಕ ಅವುಗಳ ಸಾರ ಗೊತ್ತಾಗಬೇಕು. ಅದನ್ನು ಭಾಷಾಂತರಿಸಿ ಪುಸ್ತಕ ರೂಪದಲ್ಲಿ ಹೊರ ತರಬೇಕು. ಆ ಮೂಲಕ ಜನರಿಗೆ ಪ್ರಾಚೀನ ಸಂಸ್ಕೃತಿಯ ಪರಿಚಯ ಮಾಡಿಕೊಡಲು ಸಾಧ್ಯ ಎಂದು ಹೇಳಿದರು.
ರಾಜ ಮಹಾರಾಜರ ಕಾಲದ ಸಾಮಾಜಿಕ ಸ್ಥಿತಿಗತಿಗಳು ಪ್ರಾಕೃತ ಗ್ರಂಥಗಳಲ್ಲಿ ದಾಖಲಾಗಿವೆ. ಮಹಿಳೆಯರಿಗೆ ನೀಡಲಾಗಿದ್ದ ಸ್ಥಾನ ಮಾನಗಳನ್ನೂ ತಿಳಿಯಬಹುದಾಗಿದೆ. ಇತಿಹಾಸದಲ್ಲಿ ಹುದುಗಿ ಹೋಗಿರುವ ಮಹತ್ವದ ಮಾಹಿತಿಯನ್ನು ಬೆಳಕಿಗೆ ತರುವ ಕಾರ್ಯ ಆಗಬೇಕಾಗಿದೆ ಎಂದರು.
ನಾವು ಎಷ್ಟೇ ಆಧುನಿಕರಾದರೂ ಇತಿಹಾಸವನ್ನು ಮರೆಯಲು ಸಾಧ್ಯವಿಲ್ಲ. ಹೀಗಾಗಿ ಪ್ರಾಕೃತ ಭಾಷೆಯಲ್ಲಿ ಲಭ್ಯವಿರುವ ಜ್ಞಾನವನ್ನು ಪಡೆಯುವ ಪ್ರಯತ್ನಗಳಾಗ ಬೇಕು ಎಂದ ಅವರು, ಈ ಭಾಷೆಯನ್ನು ವಿಶಾಲ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.