ಆಡಳಿತಾರೂಢ ಬಿಜೆಪಿ ಸರಕಾರ ಉರುಳಿಸಲು ಇಟ್ಟ ಮುಹೂರ್ತ 'ಕೈ' ಕೊಟ್ಟಿದ್ದು ಏಕೆ ಎಂಬ ಪ್ರಶ್ನೆ ಇದೀಗ ಜೆಡಿಎಸ್ ವಲಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ ಎನ್ನಲಾಗಿದೆ.
ಜೆಡಿಎಸ್ ಆಪ್ತ ಮೂಲಗಳ ಪ್ರಕಾರ, ರಾಜ್ಯ ಸರಕಾರ ಉರುಳಿಸಲು ಮುಹೂರ್ತ ಇಟ್ಟಿದ್ದು ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ. ಅವರು ಮುಹೂರ್ತ ಇಟ್ಟ ಮೇಲೆ ಗುರಿ ಮುಟ್ಟಲೇಬೇಕಾಗಿತ್ತು. ಆದರೆ ಎಡವಿದ್ದು ಎಲ್ಲಿ ಎನ್ನುವುದು ಗೊತ್ತಾಗಿಲ್ಲ. ಅದಕ್ಕಾಗಿಯೇ ಮತ್ತೊಮ್ಮೆ ದೇವರ (?) ಮೊರೆ ಹೋಗಲು ರೇವಣ್ಣ ಚಿಂತನೆ ನಡೆಸಿದ್ದಾರೆನ್ನಲಾಗಿದೆ!.
ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆ ನಡೆಯುತ್ತಿದ್ದುದು ಹೊಸ ಸಂಗತಿ ಏನಲ್ಲ. ಆದರೆ ಅದರ ಲಾಭ ಪಡೆದು, ಕಾಂಗ್ರೆಸ್ ಸಹಕಾರದಿಂದ ಸರಕಾರ ಮಾಡುವ ಯೋಚನೆ ಹುಟ್ಟು ಹಾಕಿದ್ದು ರೇವಣ್ಣ ಎನ್ನುವುದು ಆಪ್ತರ ಮಾತು.
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಇದ್ದ ಮನಸ್ತಾಪ, ರಾಜಕೀಯ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯಲು ರೇವಣ್ಣ ವಹಿಸಿದ್ದ ಪಾತ್ರ ಮಹತ್ವದ್ದು. ಅಷ್ಟೇ ಅಲ್ಲ, ದೇವೇಗೌಡರು ಮತ್ತು ಸಿದ್ದರಾಮಯ್ಯ ನಡುವೆ ಇದ್ದ ರಾಜಕೀಯ ಹಗೆತನಕ್ಕೆ ತಣ್ಣೀರು ಸುರಿದಿದ್ದೂ ರೇವಣ್ಣ ಎನ್ನುವುದು ವಿಶೇಷ.
ಸಿದ್ದರಾಮಯ್ಯ ಜತೆ ದೇವೇಗೌಡ ಮತ್ತು ಕುಮಾರಸ್ವಾಮಿ ಮಾತುಕತೆಗೆ ಸಿದ್ಧರಿರಲಿಲ್ಲ. ಆದರೆ, ಅವರಿಬ್ಬರ ಮನವೊಲಿಸುವಲ್ಲಿ ಯಶಸ್ವಿ ಹೆಜ್ಜೆ ಇಟ್ಟ ರೇವಣ್ಣ, ಮುಂದಿನ ಸ್ಕೆಚ್ ತಯಾರಿಸಿಯೇ ಬಿಟ್ಟಿದ್ದರು. ಭಿನ್ನರನ್ನು ಸೆಳೆದು ಸರಕಾರ ಉರುಳಿಸುವ ಪ್ರಯತ್ನ ಅಮಾವಾಸ್ಯೆಗೆ ಮೊದಲೇ ನಡೆದರೆ ಮಾತ್ರ ತಮಗೆ ಅನುಕೂಲ ಆಗಲಿದೆ ಎನ್ನುವ ಜ್ಯೋತಿಷಿಯೊಬ್ಬರ ಭವಿಷ್ಯ ನಂಬಿದ ರೇವಣ್ಣ, ಅದಕ್ಕಾಗಿ ಹಲವು ದೇವಸ್ಥಾನಕ್ಕೆ ತೆರಳಿ ಪೂಜೆ ಪುನಸ್ಕಾರ ನಡೆಸಿದ್ದರು.
'ದೇವೇಗೌಡ, ರೇವಣ್ಣ ಮನಸ್ಸಿಟ್ಟು ಪೂಜೆ ಮಾಡಿದರೆ ದೇವರುಗಳು ಹೆದರುತ್ತವೆ' ಎನ್ನುವ ಮಾತು ಹಾಸನದಲ್ಲಿ ಚಾಲ್ತಿಯಲ್ಲಿದೆ. ದೇವರನ್ನು ಒಲಿಸಿಕೊಳ್ಳುವಲ್ಲಿ ಎಡವಿದ್ದೆಲ್ಲಿ ಎನ್ನುವುದು ರೇವಣ್ಣಗೂ ಯಕ್ಷಪ್ರಶ್ನೆಯಾಗಿದೆಯಂತೆ!. ವಿಜಯ ದಶಮಿಯೊಳಗೆ ಅಧಿಕಾರ ಪ್ರಾಪ್ತವಾಗುವ ಯೋಗವಿದೆ. ಅದನ್ನು ಬಿಟ್ಟರೆ ಮತ್ತೆ ಯೋಗ ಮಂಕಾಗಲಿದೆ ಎನ್ನುವ ಜ್ಯೋತಿಷಿಯೊಬ್ಬರ ಮಾತಿಗೆ ರೇವಣ್ಣ ಹೆಚ್ಚು ಬೆಲೆ ಕೊಟ್ಟಿದ್ದಾರೆ ಎನ್ನುವ ಮಾತು ಕೇಳಿಬರುತ್ತಿವೆ.
ಇನ್ನೇನು ಕೈಗೆ ಸಿಕ್ಕಿತು ಎನ್ನುವಷ್ಟರಲ್ಲಿ ಅಧಿಕಾರದ ಚುಕ್ಕಾಣಿ ತಪ್ಪುತ್ತಿರುವುದರಿಂದ ಮತ್ತೊಮ್ಮೆ ಸರಿಯಾಗಿ ಭವಿಷ್ಯ ಕೇಳಿ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.