16 ಮಂದಿ ಶಾಸಕರ ಅನರ್ಹತೆ ಪ್ರಕರಣ ಹೈಕೋರ್ಟ್‌ನಲ್ಲಿ ಇರುವುದರಿಂದ ಈ ಬಗ್ಗೆ ಕೋರ್ಟ್ ಅಂತಿಮ ತೀರ್ಪು ಬಂದ ಮೇಲೆಯೇ 2ನೇ ಬಾರಿಯ ವಿಶ್ವಾಸಮತ ಯಾಚನೆ ಸಭೆಯನ್ನು ನಡೆಸಿ ಎಂಬ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ ಸ್ಪೀಕರ್ ಕೆ.ಜೆ.ಬೋಪಯ್ಯ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗುರುವಾರ ಎರಡನೇ ಬಾರಿಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಯಡಿಯೂರಪ್ಪ ಪರವಾಗಿ 106 ಹಾಗೂ ವಿರೋಧವಾಗಿ 100 ಮತ ಚಲಾವಣೆಗೊಂಡಿರುವುದಾಗಿ ಸ್ಪೀಕರ್ ಬೋಪಯ್ಯ ಘೋಷಿಸಿದರು. ಅಂತೂ ಎರಡನೇ ಬಾರಿಯ ಅಗ್ನಿ ಪರೀಕ್ಷೆಯಲ್ಲಿ ಯಡಿಯೂರಪ್ಪ ಗೆಲುವು ಸಾಧಿಸಿದಂತಾಗಿದೆ.
ತದನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಶ್ವಾಸಮತ ಪ್ರಸ್ತಾಪಕ್ಕೆ ವಿಪಕ್ಷ ನಾಯಕರ ಮನವಿ ಮೇರೆಗೆ ಸ್ಪೀಕರ್ ಬೋಪಯ್ಯ ಅವರು ತಲೆ ಎಣಿಕೆಗೆ ಸೂಚನೆ ನೀಡಿದರು. ಒಂದನೇ ಸಾಲು, ಎರಡನೇ ಸಾಲು, ಮೂರನೇ ಸಾಲು, ನಾಲ್ಕನೆ ಸಾಲು, ಐದನೇ ಸಾಲು, ಆರನೇ ಸಾಲು, ಏಳನೇ ಸಾಲು, ಎಂಟನೇ ಸಾಲಿನ ತಲೆ ಎಣಿಕೆ ಮೂಲಕ ಮತವನ್ನು ಲೆಕ್ಕಹಾಕಲಾಯಿತು. ನಂತರ ವಿಶ್ವಾಸಮತ ಇಲ್ಲ ಎಂಬುವರ ಸದಸ್ಯರ ಲೆಕ್ಕವನ್ನು ತಲೆಎಣಿಕೆ ಮೂಲಕ ನಡೆಸಲಾಯಿತು. ತಲೆ ಎಣಿಕೆ ನಂತರ ಬಹುಮತವನ್ನು ಅಂಗೀಕರಿಸಲಾಯಿತು.
ಕೇವಲ ನಾಲ್ಕು ದಿನಗಳಲ್ಲಿ ಎರಡು ಬಾರಿ ವಿಶ್ವಾಸಮತ ಸಾಬೀತುಪಡಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ದಾಖಲೆ ನಿರ್ಮಿಸಿದ್ದು, ಇದು ದೇಶದ ಇತಿಹಾಸದಲ್ಲಿಯೇ ಮೊದಲನೆಯದ್ದಾಗಿದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಸೂಚನೆ ಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ ಎರಡನೇ ಬಾರಿಯೂ ವಿಶ್ವಾಸಮತ ಯಾಚನೆಯಲ್ಲಿ ಬಹುಮತವನ್ನು ಸಾಬೀತುಪಡಿಸುವ ಮೂಲಕ ಆಡಳಿತಾರೂಢ ಬಿಜೆಪಿ ಸರಕಾರ ಬಿಕ್ಕಟ್ಟಿನಿಂದ ಪಾರಾದಂತಾಗಿದೆ. ಆದರೆ ವಿಪಕ್ಷಗಳಿಗೆ ತೀವ್ರ ಮುಖಭಂಗವಾದಂತಾಗಿದೆ.
ಸೋಮವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಫಲವಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು.
ಆದರೆ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಉಲ್ಟಾ ಹೊಡೆದ ರಾಜ್ಯಪಾಲರು ಗುರುವಾರ ಬೆಳಿಗ್ಗೆ ಮತ್ತೆ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಈ ನಿಟ್ಟಿನಲ್ಲಿ ಇಂದು ವಿಧಾನಸಭೆ ಅಧಿವೇಶನದಲ್ಲಿ ಮತ್ತೆ ವಿಶ್ವಾಸಮತ ಯಾಚಿಸಿದ್ದರು.
ಕಲಾಪ ಮುಂದೂಡಿಕೆ: ಸದನದಲ್ಲಿ ವಿಶ್ವಾಸಮತ ಮುಖ್ಯಮಂತ್ರಿಗಳು ಪಡೆದಿರುವುದಾಗಿ ಸ್ಪೀಕರ್ ಬೋಪಯ್ಯ ಅವರು ಘೋಷಿಸಿದ ಬೆನ್ನಲ್ಲೇ, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ತಿಳಿಸಿದರು.
ವಿಶ್ವಾಸಮತ ಯಾಚನೆಯಲ್ಲಿ ಅಶ್ವತ್ಥ, ವಜ್ಜಲ್ ಗೈರು: ಇಂದು ವಿಧಾನಸಭೆಯಲ್ಲಿ ಎರಡನೇ ಬಾರಿ ನಡೆದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಚನ್ನಪಟ್ಟಣ ಜೆಡಿಎಸ್ ಶಾಸಕ ಎಂ.ಸಿ.ಅಶ್ವತ್ಥ ಹಾಗೂ ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಗೈರು ಹಾಜರಾಗಿದ್ದರು.
ಶಿಸ್ತುಬದ್ದವಾಗಿ ನಡೆದ ವಿಶ್ವಾಸಮತ ಯಾಚನೆ: ಸೋಮವಾರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ನಡೆದ ಹೊಯ್ ಕೈ, ಅವಾಚ್ಯ ಶಬ್ದಗಳ ಘಟನೆಯಿಂದಾಗಿ ರಾಜ್ಯರಾಜಕಾರಣದ ಘಟನೆ ಇಡೀ ದೇಶದ ಗಮನ ಸೆಳೆದಿತ್ತು. ಆದರೆ ಗುರುವಾರ ಎರಡನೇ ಬಾರಿಗೆ ವಿಶ್ವಾಮತ ಯಾಚನೆ ಸಂದರ್ಭದಲ್ಲಿ ಎಲ್ಲ ಶಾಸಕರು ಶಿಸ್ತು ಬದ್ದವಾಗಿ ಸಹಕರಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು.
ಇಂದಿನ ವಿಶ್ವಾಸಮತ ಕೋರ್ಟ್ ತೀರ್ಪಿಗೆ ಒಳಪಟ್ಟಿರುತ್ತದೆ: ಐವರು ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣದ ಕುರಿತು ಬುಧವಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಗುರುವಾರ ನಡೆಯುವ ವಿಶ್ವಾಸಮತ ಯಾಚನೆ ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆದೇಶ ನೀಡಿತ್ತು. ಆ ನಿಟ್ಟಿನಲ್ಲಿ ಇಂದು ವಿಶ್ವಾಸಮತದಲ್ಲಿ ಯಡಿಯೂರಪ್ಪ ಬಹುಮತ ಸಾಬೀತುಪಡಿಸಿದ್ದರೂ ಕೂಡ, ಅ.18 ಅಥವಾ ನಂತರ ಹೈಕೋರ್ಟ್ ನೀಡುವ ಅಂತಿಮ ತೀರ್ಪಿನ ಮೇಲೆ ಮುಂದಿನ ಬೆಳವಣಿಗೆ ನಿರ್ಧಾರವಾಗಲಿದೆ.