ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಕೋರಿಕೆ ಮೇರೆಗೆ ಗುರುವಾರ ನಡೆದ 2ನೇ ಬಾರಿಯ ವಿಶ್ವಾಸಮತದಲ್ಲಿಯೂ ಆಡಳಿತಾರೂಢ ಬಿಜೆಪಿ ಸರಕಾರ ಜಯ ಗಳಿಸಿದೆ. ಇದು ಜನಾದೇಶಕ್ಕೆ ದೊರೆತ ಮನ್ನಣೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹರ್ಷ ವ್ಯಕ್ತಪಡಿಸಿದರು.
ಗುರುವಾರ ವಿಧಾನಸಭೆಯ ಅಧಿವೇಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ 106 ಮತ ಹಾಗೂ ಸಿಎಂ ವಿರುದ್ಧವಾಗಿ 100 ಮತಗಳು ಚಲಾವಣೆಗೊಂಡಿತ್ತು. ಸದಸ್ಯರ ತಲೆಎಣಿಕೆ ಮೂಲಕ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಿರುವುದಾಗಿ ಸ್ಪೀಕರ್ ಕೆ.ಜಿ.ಬೋಪಯ್ಯ ಘೋಷಿಸಿದ್ದರು.
'ವಾರದಲ್ಲಿ ಎರಡು ಬಾರಿ ವಿಶ್ವಾಸಮತ ಸಾಬೀತುಪಡಿಸಿರುವುದು ದೇಶದ ಇತಿಹಾಸದಲ್ಲಿಯೇ ಮೊದಲನೆಯದ್ದಾಗಿದೆ' ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ಹೆಮ್ಮೆ ವ್ಯಕ್ತಪಡಿಸಿದರು.ಅಲ್ಲದೇ ಇನ್ನಾದರೂ ಪ್ರತಿಪಕ್ಷಗಳು ಜವಾಬ್ದಾರಿಯುತವಾಗಿ ವರ್ತಿಸಲಿ ಎಂದು ಸಲಹೆ ನೀಡಿದರು.
ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದ ದಿನದಿಂದ ಆರಂಭಿಸಿ ಈವರೆಗೂ ಪ್ರತಿಪಕ್ಷಗಳು ಸರಕಾರದ ವಿರುದ್ಧ ಸಂಚು ರೂಪಿಸುತ್ತಲೇ ಬಂದಿವೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕು. ಆ ನಿಟ್ಟಿನಲ್ಲಿ ಪ್ರತಿಪಕ್ಷಗಳು ಸೂಕ್ತ ಸಲಹೆ-ಸೂಚನೆ ನೀಡಲಿ. ಅದನ್ನು ಬಿಟ್ಟು ಜನಾದೇಶ ಪಡೆದ ಸರಕಾರವನ್ನು ಅಸ್ಥಿರಗೊಳಿಸುವಂತಹ ಕೀಳುಮಟ್ಟದ ರಾಜಕೀಯ ಕಾಂಗ್ರೆಸ್, ಜೆಡಿಎಸ್‌ಗೆ ಶೋಭೆಯಲ್ಲ ಎಂದು ತಿರುಗೇಟು ನೀಡಿದರು.
ರಾಜ್ಯಾದ್ಯಂತ ವಿಜಯೋತ್ಸಾಹ: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಯಾಚನೆಯಲ್ಲಿ ಜಯಗಳಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯದ ಎಲ್ಲೆಡೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಬಳ್ಳಾರಿ, ಸಾಗರ, ಉಡುಪಿ ಸೇರಿದಂತೆ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಜಯಘೋಷ ಹಾಕಿ ವಿಜಯೋತ್ಸಾಹ ಆಚರಿಸಿದರು.
ರಾಜ್ಯಪಾಲರು ದೆಹಲಿಗೆ ತೆರಳಲಿ-ವೆಂಕಯ್ಯ ಗುಡುಗು: ಇಂದು ವಿಧಾನಸಭೆಯಲ್ಲಿ 2ನೇ ಬಾರಿಯೂ ಯಡಿಯೂರಪ್ಪ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿರುವುದು ಪ್ರಜಾತಂತ್ರದ ಗೆಲುವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಬಣ್ಣಿಸಿದರು.
ಸರಕಾರದ ಈ ಗೆಲುವು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತು ಕಾಂಗ್ರೆಸ್,ಜೆಡಿಎಸ್‌ಗೆ ಛಾಟಿಯೇಟು ಎಂದ ಅವರು, ರಾಜ್ಯಪಾಲರಿಗೆ ನೈತಿಕತೆ ಇದ್ದರೆ ದೆಹಲಿಗೆ ವಾಪಸ್ ಆಗಲಿ ಎಂದು ಗುಡುಗಿದ್ದಾರೆ.