ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಬಹುಮತ ಕಳೆದುಕೊಂಡು ಅಲ್ಪಮತದ ಸರಕಾರವಾಗಿದೆ. ರಾಜ್ಯಪಾಲರು ಈಗಾಗಲೇ ಕಳುಹಿಸಿರುವ ವರದಿಯನ್ನಾಧರಿಸಿ ಕೇಂದ್ರ ಸರಕಾರ ಬಿಜೆಪಿ ಸರಕಾರವನ್ನು ವಜಾಗೊಳಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಗುರುವಾರ ನಡೆದ ಎರಡನೇ ಬಾರಿಯ ವಿಶ್ವಾಸಮತ ಯಾಚನೆ ಕಲಾಪದ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಇಂದು ಗಳಿಸಿದ ವಿಶ್ವಾಸಮತಕ್ಕೆ ಯಾವುದೇ ಬೆಲೆ ಇಲ್ಲ. ಇದು ಅಲ್ಪಮತದ ಸರಕಾರವಾಗಿದೆ. ಸಂವಿಧಾನ ಬಾಹಿರವಾಗಿ ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಈ ವಿವಾದ ಕೋರ್ಟ್‌ನಲ್ಲಿಯೇ ಇದೆ. ಹಾಗಾಗಿ ಇಂದಿನ ವಿಶ್ವಾಸಮತಕ್ಕೆ ಕಿಮ್ಮತ್ತಿಲ್ಲ, ಕೋರ್ಟ್ ಅಂತಿಮ ತೀರ್ಪಿನ ನಂತರವೇ ಸರಕಾರದ ಹಣೆಬರಹ ನಿರ್ಧಾರವಾಗಲಿದೆ ಎಂದರು.
224 ಸದಸ್ಯ ಬಲದ ವಿಧಾನಸಭೆಯಲ್ಲಿ ಯಡಿಯೂರಪ್ಪನವರ ಪರ 113 ಶಾಸಕರ ಬೆಂಬಲ ಇಲ್ಲ, ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ಯಡಿಯೂರಪ್ಪ ಸರಕಾರ 106 ಶಾಸಕರ ಬೆಂಬಲ ಮಾತ್ರ ಪಡೆದಿದ್ದಾರೆ. ಆ ನಿಟ್ಟಿನಲ್ಲಿ ಈ ಸರಕಾರ ಬಹುಮತ ಕಳೆದುಕೊಂಡಿದೆ ಎಂದು ವಿವರಿಸಿದರು.
ಈ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು 16 ಶಾಸಕರು ಹೊರಗಿದ್ದಾರೆ. ಅವರನ್ನು ಅನರ್ಹಗೊಳಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಕೋರ್ಟ್ ತೀರ್ಪು ಬಂದ ಮೇಲೆಯೇ ಮುಖ್ಯಮಂತ್ರಿ ವಿಶ್ವಾಸಮತ ಸಾಬೀತುಪಡಿಸಲಿ ಎಂದರು.
ಸರಕಾರ ಉರುಳಿಸುವವರೆಗೆ ಬಿಡಲ್ಲ-ಡಿಕೆಶಿ: ಆಪರೇಷನ್ ಕಮಲದ ನಂತರ ಬಿಜೆಪಿಯ ಕಮಲ ಕೆಸರಿನಲ್ಲಿ ಸಿಕ್ಕಿಕೊಂಡಿದೆ. ಈ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
ಇವತ್ತಿನ ಸೋಲು ನಮಗೆ ಸೋಲಲ್ಲ, ಮುಂದೆ ನಮಗೆ ಜಯ ಸಿಕ್ಕೆ ಸಿಗುತ್ತದೆ. ಈ ಸರಕಾರವನ್ನು ಉರುಳಿಸುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ಬಿಜೆಪಿ ಸರಕಾರಕ್ಕೆ ಇದು ಸೆಮಿ ಫೈನಲ್ ಹೊರತು, ಫೈನಲ್ ಅಲ್ಲ ಎಂದರು. ಕಾಂಗ್ರೆಸ್ ಪಕ್ಷ ನೇರವಾಗಿ ಯುದ್ಧವನ್ನು ಎದುರಿಸಿ ಹೋರಾಡುತ್ತದೆ. ರಣಹೇಡಿ ಪಕ್ಷ ಕಾಂಗ್ರೆಸ್ ಅಲ್ಲ ಎಂದು ಹೇಳಿದರು. ಬಿಜೆಪಿ ಪಕ್ಷದಿಂದಾಗಿ ಶಾಸಕಾಂಗಕ್ಕಿಂತ ನ್ಯಾಯಾಲಯವೇ ದೊಡ್ಡದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವರ್ತೂರು ನಮ್ಮವರಲ್ಲ: ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಎಂದೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಅವರು ನಿನ್ನೆ ಜೆಡಿಎಸ್‌ನಲ್ಲಿದ್ದರು. ಇಂದು ಬಿಜೆಪಿಯಲ್ಲಿದ್ದಾರೆ. ನಾಳೆ ಪಕ್ಷೇತರರಾಗಿ ಉಳಿಯಬಹುದು ಎಂದು ಡಿಕೆಶಿ ವ್ಯಂಗ್ಯವಾಡಿದರು.
ಪಕ್ಷಾಂತರಿಗಳಿಗೆ ಪಾಠ-ಆರ್.ಅಶೋಕ್: ಇಂದಿನ ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೆಲುವು ಸಾಧಿಸಿದ್ದಾರೆ. ಆ ನಿಟ್ಟಿನಲ್ಲಿ ಇದು ಪಕ್ಷಾಂತರಿಗಳಿಗೊಂದು ಪಾಠವಾಗಿದೆ ಎಂದು ಗೃಹ ಸಚಿವ ಆರ್.ಅಶೋಕ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಒಂದು ಸಲ ಜನಾದೇಶ ಪಡೆದು ಆಯ್ಕೆಯಾದ ಸರಕಾರ ಐದು ವರ್ಷಗಳ ಕಾಲ ಆಡಳಿತ ನಡೆಸಬೇಕು. ಆ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತದೆ. ಆದರೆ ವಾಮಮಾರ್ಗದಲ್ಲಿ ಸರಕಾರವನ್ನು ಅಸ್ಥಿರಗೊಳಿಸುವ ಕಾಂಗ್ರೆಸ್, ಜೆಡಿಎಸ್ ತಂತ್ರ ಯಶಸ್ವಿಯಾಗುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿರುಗೇಟು ನೀಡಿದರು.
ಸಿಎಂ ರಾಜಭವನಕ್ಕೆ ಭೇಟಿ: ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಆಹ್ವಾನದ ಮೇರೆಗೆ ಎರಡನೇ ಬಾರಿ ವಿಶ್ವಾಸಮತ ಸಾಬೀತುಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕಾನೂನು ಸಚಿವ ಸುರೇಶ್ ಕುಮಾರ್ ಸೇರಿದಂತೆ ಹಲವು ಸಚಿವರು, ಶಾಸಕರು ಹಾಜರಿದ್ದರು.