ಗಾನಯೋಗಿ ಪಂಡಿತ್ ಡಾ.ಪುಟ್ಟರಾಜ ಗವಾಯಿರವರು ಸಾಹಿತ್ಯ, ಸಂಗೀತ ಹಾಗೂ ನಾಟಕ ಕಲೆಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ ಎಂದು ಹಿರಿಯ ನಟ ರಾಜೇಶ್ ಹೇಳಿದರು.
ಸಂಸ್ಕೃತಿ ಸೌರಭ ಟ್ರಸ್ಟ್ ವತಿಯಿಂದ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗಾನಯೋಗಿ ಪಂಡಿತ್ ಡಾ. ಪುಟ್ಟರಾಜ ಗವಾಯಿರವರ ಗೌರವಾರ್ಥ ನಡೆದ ರಂಗ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಚಿಕ್ಕವರಿದ್ದಾಗ ಕಣ್ಣಿಗೆ ಔಷಧ ಹಾಕಿಕೊಳ್ಳುವಾಗ ನಡೆದ ಅಚಾತುರ್ಯದಿಂದ ದೃಷ್ಟಿ ಕಳೆದುಕೊಂಡಿದ್ದರೂ, ಸಾವಿರಾರು ಅಂಧರಿಗೆ ಆಶಾಕಿರಣವಾಗಿ ಬಾಳಿದ ಗವಾಯಿಯವರು, ಅಂಧರಿಗೆ ಮತ್ತು ಅನಾಥರಿಗೆ ಸಂಗೀತ ಶಿಕ್ಷಣ ನೀಡಿ ಅವರ ಬಾಳಿಗೆ ಬೆಳಕಾಗಿದ್ದರು. ಅವರ ಹೆಸರಿನಲ್ಲಿ ಎಲ್ಲ ಕಲಾವಿದರನ್ನು ಒಂದೇ ವೇದಿಕೆಗೆ ಕರೆತಂದಿರುವುದು ಶ್ಲಾಘನೀಯ ಎಂದರು.
ರಂಗಗೀತೆಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದು, ಸ್ಪರ್ಧೆ ಆರೋಗ್ಯಕರವಾಗಿರಬೇಕು. ಪೌರಾಣಿಕ ರಂಗ ಕಲೆಗಳ ಏಳಿಗೆಗೆ ಸರಕಾರಿ ನೌಕರರ ಸಂಘ ಎಂದಿಗೂ ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಿದರು.