ನಮ್ಮ ಜತೆ ಇರುವ ಬಿಜೆಪಿ ಅತೃಪ್ತ ಮತ್ತು ಪಕ್ಷೇತರ ಶಾಸಕರು ನಂಟಿನಿಂದ ಬಂದಿದ್ದಾರೆಯೇ ಹೊರತು ಗಂಟಿನ ಆಸೆಗೆ ಬಂದಿಲ್ಲ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ತಮ್ಮ ಪಕ್ಷದ ಸದಸ್ಯರು ಗಂಟಿನಾಸೆಗೆ ಜೆಡಿಎಸ್ ಕಡೆಗೆ ಹೋಗಿದ್ದಾರೆ ಎಂದು ಬಿಜೆಪಿ ವಕ್ತಾರ ಸಿ.ಟಿ. ರವಿ ಹೇಳಿದ್ದಾರೆ. ಆದರೆ ನಮ್ಮ ಜತೆಯಲ್ಲಿರುವ ಬಿಜೆಪಿಯ ಶಾಸಕರು ಮತ್ತು ಪಕ್ಷೇತರರು ನಮ್ಮಿಂದ ಯಾವುದೇ ಗಂಟು ಪಡೆಯಲು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಶಾಸಕ ಎಂ.ಸಿ. ಅಶ್ವತ್ಥ್ ಅವರಿಗೆ ಗಂಟಿನ ಆಸೆ ತೋರಿಸಿ ಬಿಜೆಪಿಯವರು ಕರೆದುಕೊಂಡು ಹೋಗಿದ್ದಾರೆ. ಆದರೆ, ಈಗ ಅವರು ಅಧಿಕಾರದ ನಂಟು, ಜತೆಗೆ ಒಂದಷ್ಟು ಗಂಟನ್ನೂ ಕಳೆದುಕೊಂಡಿದ್ದಾರೆ. ಇದನ್ನು ಸಿ.ಟಿ. ರವಿ ಅವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಾವು ನಮ್ಮ ಗಂಟು ಮತ್ತು ನಂಟನ್ನು ಉಳಿಸುಕೊಳ್ಳುತ್ತೇವೆ. ಅದರಂತೆ ಬಿಜೆಪಿಯವರೂ ಇವೆರಡನ್ನು ಉಳಿಸಿಕೊಂಡು ತೋರಿಸಲಿ. ಸರಕಾರ ಪತನ ನಿಶ್ಚಿತ. ಸದ್ಯ ವಿಶ್ವಾಸಮತ ಗೆದ್ದಿರಬಹುದು. ಆದರೆ ಇದೇ ಅಂತಿಮವಲ್ಲ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿದೆ. ನಾವು ಕೂಡ ರಾಷ್ಟ್ರಪತಿಯವರಿಗೆ ಬಿಜೆಪಿ ಸರಕಾರದ ಪರಿಸ್ಥಿತಿಯನ್ನ ಅರ್ಥ ಮಾಡಿಕೊಡಲಿದ್ದೇವೆ. ಅಲ್ಪಮತವಿರುವ ಯಾವುದೇ ಸರಕಾರ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಲು ಸಾದ್ಯವಿಲ್ಲ ಎಂದು ಹೇಳಿದರು.