ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ಪತ್ರ ರವಾನಿಸಿರುವುದಾಗಿ ಅಶ್ವತ್ಥ ತಿಳಿಸಿದ್ದಾರೆ. 'ನನಗೆ ವೈಯಕ್ತಿಕವಾಗಿ ಬೇಸರವಾಗಿದೆ. ಹಾಗಾಗಿ ರಾಜೀನಾಮೆ ಕೊಟ್ಟಿರುವುದಾಗಿ' ಖಾಸಗಿ ಸುದ್ದಿವಾಹಿನಿಯೊಂದಕ್ಕೆ ವಿವರಿಸಿದ್ದಾರೆ.
ಪಕ್ಷದ ನಾಯಕರಿಂದ ತನಗೆ ಯಾವುದೇ ತೊಂದರೆ ಇಲ್ಲ. ಕಳೆದ ಒಂದು ವಾರದಿಂದ ತಮಿಳುನಾಡು ಪ್ರವಾಸದಲ್ಲಿದ್ದೆ. ಹಾಗಾಗಿ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಇದೀಗ ನನ್ನ ವೈಯಕ್ತಿಕ ಕಾರಣದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದರು.
ರಾಜ್ಯರಾಜಕೀಯದ ದೊಂಬರಾಟದ ನಡುವೆಯೇ ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಅಶ್ವತ್ಥ ಅವರು ನಾಪತ್ತೆಯಾಗಿದ್ದರು. ಏತನ್ಮಧ್ಯೆ, ತಾನು ಚನ್ನಪಟ್ಟಣ ಕ್ಷೇತ್ರದಲ್ಲಿಯೇ ಇದ್ದು, ಜೆಡಿಎಸ್ ಪಕ್ಷದ ಜೊತೆಗೆ ಇದ್ದಿರುವುದಾಗಿ ಸ್ಪಷ್ಟನೆ ನೀಡಿದ್ದರು. ಆದರೆ ಅ.11ರಂದು ನಡೆದ ವಿಶ್ವಾಸಮತ ಯಾಚನೆಗಾಗಲಿ, ಅ.14ರಂದು ನಡೆದು ವಿಶ್ವಾಸಮತ ಯಾಚನೆಯಲ್ಲಿ ಕಲಾಪಕ್ಕೆ ಗೈರುಹಾಜರಾಗಿದ್ದರು.
ಜೆಡಿಎಸ್ ಶಾಸಕ ಅಶ್ವತ್ಥ ಅವರನ್ನು ಸಚಿವ ಜನಾರ್ದನ ರೆಡ್ಡಿ ಕೂಡಿಹಾಕಿರುವುದಾಗಿ ಜೆಡಿಎಸ್ ಮುಖಂಡರು ಗಂಭೀರವಾಗಿ ಆರೋಪಿಸಿದ್ದರು. ಅಲ್ಲದೆ ಅಶ್ವತ್ಥ ಅವರನ್ನು ಸುಮಾರು 30 ಕೋಟಿ ರೂಪಾಯಿಗೆ ರೆಡ್ಡಿ ಖರೀದಿಸಿರುವುದಾಗಿಯೂ ದೂರಿದ್ದರು. ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ರಾಜೀನಾಮೆ ಪರ್ವ ಮತ್ತಷ್ಟು ಮುಂದುವರಿಯುವ ಸಾಧ್ಯತೆಯೂ ದಟ್ಟವಾಗಿದೆ!