ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಚಿಕ್ಕಮಗಳೂರು: ಮೂವರು ನಕ್ಸಲ್ ಯುವತಿಯರು ಶರಣು (Naxal | Chikkamagalore | Channappa gowda | Mallika | Jaya)
Bookmark and Share Feedback Print
 
PTI
ಜಿಲ್ಲೆಯಲ್ಲಿನ ಅಭಿವೃದ್ಧಿ ಕೆಲಸ ಮೆಚ್ಚಿ ಮೂವರು ನಕ್ಸಲ್ ಯುವತಿಯರು ಗುರುವಾರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಚನ್ನಪ್ಪಗೌಡ ಎದುರು ಶರಣಾಗಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು ನಾಲ್ಕು ಮಂದಿ ನಕ್ಸಲೀಯರು ಶಸ್ತ್ರಾಸ್ತ್ರ ತೊರೆದು ಶರಣಾದಂತಾಗಿದೆ.

ಜಿಲ್ಲೆಯ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬಿದ್ದಿದ್ದನ್ನು ವಿರೋಧಿಸಿ ನಕ್ಸಲ್ ಚಳವಳಿಗೆ ಸೇರಿದ್ದ ಕೊಪ್ಪ ತಾಲೂಕಿನ ಎಲೆಮಡ್ಲು ಗ್ರಾಮದ ಮಲ್ಲಿಕಾ, ಕೊಪ್ಪ ತಾಲೂಕಿನ ಮೇಗೂರು ಗ್ರಾಮದ ಜಯಾ ಹಾಗೂ ಕೋಮಲಾ ಇಂದು ಶಸ್ತ್ರಾಸ್ತ್ರ ಹೋರಾಟ ತ್ಯಜಿಸಿ ನಕ್ಸಲ್ ಚಟುವಟಿಕೆಯಿಂದ ಹೊರಬರುವುದಾಗಿ ತಿಳಿಸಿ ಜಿಲ್ಲಾಧಿಕಾರಿ ಮುಂದೆ ಶರಣಾಗತರಾದರು.

ಮಲ್ಲಿಕಾ ವಿರುದ್ಧ ಆರು ಪ್ರಕರಣ ದಾಖಲಾಗಿದ್ದು, ಎಲ್ಲಾ ಖುಲಾಸೆಯಾಗಿದೆ. ಜಯಾ ವಿರುದ್ಧ ಎರಡು ಪ್ರಕರಣ ದಾಖಲಾಗಿದ್ದು, ಖುಲಾಸೆಯಾಗಿದೆ. ಅದೇ ರೀತಿ ಕೋಮಲಾ ವಿರುದ್ದ ಒಂದು ಪ್ರಕರಣ ದಾಖಲಾಗಿದ್ದು, ಖುಲಾಸೆಯಾಗಿದೆ ಎಂದು ಮೂರು ಯುವತಿಯರು ಶರಣಾದ ನಂತರ ಸುದ್ದಿಗಾರರ ಜತೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಶರಣಾಗತ ಮೂವರು ನಕ್ಸಲ್ ಯುವತಿಯರು ಗೆರಿಲ್ಲಾ ಮಾದರಿ ಯುದ್ಧ ಹಾಗೂ ಬಂದೂಕು ತರಬೇತಿ ಪಡೆದಿದ್ದರು. ಇದೀಗ ನಕ್ಸಲ್ ಹೋರಾಟದಿಂದ ಹೊರಬಂದು ಜನಪರ ಕಾರ್ಯಗಳಲ್ಲಿ ತೊಡಗಿಕೊಳ್ಳುವುದಾಗಿ ಶರಣಾಗತ ನಕ್ಸಲ್ ಯುವತಿಯರಾದ ಮಲ್ಲಿಕಾ, ಜಯಾ ಮತ್ತು ಕೋಮಲಾ ವಿವರಿಸಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ಈವರೆಗೆ ನಾಲ್ವರು ನಕ್ಸಲೀಯರು ಶರಣಾಗತರಾದಂತಾಗಿದೆ. ಇತ್ತೀಚೆಗಷ್ಟೇ ನಕ್ಸಲ್ ವೆಂಕಟೇಶ್ ಶರಣಾಗತನಾಗಿದ್ದ. ಆ ಬಳಿಕ ಈಗ ಮೂವರು ನಕ್ಸಲ್ ಯುವತಿಯರು ಶರಣಾಗರಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನಕ್ಸಲೀಯರು ಶರಣಾಗತರಾಗುವ ಸಾಧ್ಯತೆ ಇರುವುದಾಗಿ ಜಿಲ್ಲಾಧಿಕಾರಿ ಚನ್ನಪ್ಪಗೌಡ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಶರಣಾಗತ ನಕ್ಸಲೀಯರಿಗೆ ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಒಂದು ಲಕ್ಷ ರೂಪಾಯಿ ನೀಡಲಾಗುತ್ತದೆ. ಈ ಪ್ಯಾಕೇಜ್ ಅನ್ನು ಸರಕಾರವೇ ಘೋಷಿಸಿತ್ತು. ಅಲ್ಲದೇ ಅವರಿಗೆ ಬೇಕಾದ ವಸತಿ, ಉದ್ಯೋಗ ವ್ಯವಸ್ಥೆ ಮಾಡಿಕೊಡುವುದಾಗಿಯೂ ಸರಕಾರ ಭರವಸೆ ನೀಡಿತ್ತು. ಅಷ್ಟೇ ಅಲ್ಲ ಶರಣಾಗತ ನಕ್ಸಲ್ ಯುವತಿಯರು ಜಿಲ್ಲಾಡಳಿತದ ಮುಂದೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಆ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಮಲ್ಲಿಕಾ ನಾಲ್ಕು ವರ್ಷ ಜೈಲಿನಲ್ಲಿದ್ದಳು!: ಶೃಂಗೇರಿ ತಾಲೂಕಿನ ತನಿಗೋಡು ಚೆಕ್‌ಪೋಸ್ಟ್ ಧ್ವಂಸ, ಕೆರೆಕಟ್ಟೆ ವಲಯ ಅರಣ್ಯಾಧಿಕಾರಿ ಕಚೇರಿಗೆ ಬೆಂಕಿ, ಮೆಣಸಿನ ಹಾಡ್ಯದ ಶೇಷೇಗೌಡ್ಲು ಹತ್ಯೆ, ನರಸಿಂಹ ಪರ್ವತದ ಬೇಟೆ ನಿಗ್ರಹ ಕಾವಲು ಗೋಪುರ ಧ್ವಂಸ ಹಾಗೂ ಮಗೇಬೈಲು ಚಂದ್ರಶೇಖರ್ ಮನೆಯಲ್ಲಿ ಬಂದೂಕು ಅಪಹರಣ ಆರೋಪದ ಮೇಲೆ ನವೆಂಬರ್ 2005ರಲ್ಲಿ ಮಲ್ಲಿಕಾಳನ್ನು ಪೊಲೀಸರು ಬಂಧಿಸಿದ್ದರು.

ಆದರೆ ಆಕೆಯ ಮೇಲೆ ದಾಖಲಾಗಿದ್ದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ 2009ರಂದು ಮಲ್ಲಿಕಾ ಖುಲಾಸೆಗೊಂಡಿದ್ದಳು. ಆದರೆ ಈ ಸಂದರ್ಭದಲ್ಲಿ ತಾನು ಜನಪರ ಹೋರಾಟದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿ, ಮತ್ತೆ ನಕ್ಸಲ್ ಚಳವಳಿಗೆ ಸೇರಿದ್ದ ಮಲ್ಲಿಕಾ ಜಿಲ್ಲಾಡಳಿತದ ಮುಂದೆ ಶರಣಾಗುವ ಮೂಲಕ ನಕ್ಸಲ್ ಹೋರಾಟಕ್ಕೆ ಗುಡ್ ಬೈ ಹೇಳಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ