ಹಣಬಲದಿಂದ ಗಣಿಧಣಿಗಳು ರಾಜಕಾರಣವನ್ನೇ ಹೊಲಸು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, ಈ ಗಣಿಗಳು ಇರಬಾರದು ಎನ್ನುವ ಚಳವಳಿ ನಡೆಸುವ ಅಗತ್ಯ ಇದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಇಡೀ ರಾಜಕಾರಣವನ್ನೇ ಗಣಿ ಧಣಿಗಳು ಕುಲಗೆಡಿಸಿಬಿಟ್ಟಿದ್ದಾರೆ. ಈ ಗಣಿಗಳಿಗೆ ಅಂತ್ಯ ಹಾಡಲೇಬೇಕಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಾ.ರಾಮಮನೋಹರ ಲೋಹಿಯಾ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಪೇದೆಯ ಮಕ್ಕಳಾಗಿದ್ದವರು ಇಂದು ಭಾರೀ ಪ್ರಮಾಣದಲ್ಲಿ ಹಣಗಳಿಸಿ ರಾಜಕಾರಣವನ್ನೇ ಹಾಳು ಮಾಡಿದ್ದಾರೆಂದು ಬಳ್ಳಾರಿ ರೆಡ್ಡಿ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ರಾಜಕಾರಣದಲ್ಲಿ ಜಾತಿಗಿಂತ ಹಣವೇ ಪ್ರಮುಖವಾಗುತ್ತಿದೆ. ಕೋಟಿಗಟ್ಟಲೇ ಹಣ ಕೊಟ್ಟು ಏನನ್ನು ಬೇಕಾದರೂ ಮಾಡುವ ರಾಜಕಾರಣ ನಡೆಯುತ್ತಿದೆ. ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಹಿಡನ್ ಅಜೆಂಡಾ ಇದ್ದೇ ಇರುತ್ತದೆ. ಅವು ಮಾತನಾಡುವುದು ಒಂದು, ಮಾಡುವುದು ಇನ್ನೊಂದು ಎಂದರು.
ಕಳೆದ ಕೆಲ ದಿನಗಳಿಂದ ಯಡಿಯೂರಪ್ಪ ಮಾಡಿದಷ್ಟು ಪೂಜೆ, ದೇವೇಗೌಡರು ಮಾಡಿದಷ್ಟು ವ್ರತ ಯಾರು ಮಾಡಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿ ಕೂಡ ಯಾವತ್ತೂ ದೇವಸ್ಥಾನಕ್ಕೆ ಹೋದವರಲ್ಲ ಎಂದು ವಿಶ್ಲೇಷಿಸಿದರು. ಡಾ.ಲೋಹಿಯಾ ಮತ್ತು ಡಾ.ಅಂಬೇಡ್ಕರ್ ಅವರುಗಳು ಸಮಾನ ವಿಚಾರಧಾರೆಯ ರಾಷ್ಟ್ರ ನಾಯಕರೆಂದು ಈ ಸಂದರ್ಭದಲ್ಲಿ ಹೇಳಿದರು.